ಪಿರಿಯಾಪಟ್ಟಣ: ಪತ್ನಿಯನ್ನು ಕೊಲೆ ಮಾಡಿ ನೇತು ಹಾಕಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಂಕನಹಳ್ಳಿ ಗ್ರಾಮದ ಸರಳ (24) ಎಂಬಾಕೆ ಕೊಲೆಯಾದ ನತದೃಷ್ಟೆ. ದೊಡ್ಡ ಸೋಮಾಚಾರಿಯ ಮಗ ವೀರಭದ್ರಚಾರಿ ಬಂಧಿತ ಆರೋಪಿ. ಕಳೆದ ಆರು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಲಕ್ಕೂರು ಗ್ರಾಮದ ಸೋಮಾಚಾರಿ ಎಂಬುವರ ಪುತ್ರಿ ಸರಳಾಳನ್ನು ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದ ವೀರಭದ್ರಚಾರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.
ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಅರ್ಚನಾ ಮತ್ತು ಒಂದೂವರೆ ವರ್ಷದ ಗಂಡು ಮಗು ಚಂದು ಎಂಬ ಇಬ್ಬರು ಮಕ್ಕಳಿದ್ದು, ವೀರಭದ್ರಚಾರಿ ಮತ್ತು ಸರಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಮೃತಳ ಅಣ್ಣ ಭದ್ರಾಚಾರಿ ತಿಳಿಸಿದ್ದಾರೆ. ಸಾವಿಗೆ ಮೊದಲು ಪತ್ರವೊಂದನ್ನು ಆಕೆಯ ಕೈಯಲ್ಲಿ ಬರೆಸಿದ್ದು, ಜಾಗೃತೆಯಿಂದ ಈಕೆಯನ್ನು ಕೊಲೆ ಮಾಡಿ ಹಗ್ಗದಿಂದ ನೇತು ಹಾಕಿದ್ದಾನೆ ಎಂದು ಭದ್ರಚಾರಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸರಳಾಳ ಮೃತ ದೇಹದ ಮೇಲೆ ತೀವ್ರ ಗಾಯಗಳಾಗಿದ್ದು, ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ವೀರಭದ್ರಚಾರಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.