ಮಡಿಕೇರಿ: ಕೊಡಗಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕುಶಾಲನಗರ ಬಳಿಯಿರುವ ಪ್ರವಾಸಿ ತಾಣಗಳಲ್ಲೊಂದಾದ ಕಾವೇರಿ ನಿಸರ್ಗಧಾಮ ಹತ್ತು ದಿನಗಳ ಕಾಲ ಬಂದ್ ಆಗಲಿದ್ದು, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಆದ್ದರಿಂದ ವೀಕೆಂಡ್ ಟ್ರಿಪ್ ಅನ್ನು ಕಾವೇರಿ ನಿಸರ್ಗಧಾಮಕ್ಕೆ ಇಟ್ಟುಕೊಂಡಿದ್ದರೆ ಅದನ್ನು ಮುಂದೂಡುವುದು ಒಳಿತು. ದಿನನಿತ್ಯ ಅಲ್ಲದೆ ವಾರಾಂತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡುತ್ತಾರೆ. ಒಂದಷ್ಟು ಹೊತ್ತು ಸಮಯ ಕಳೆದು ಹಿಂತಿರುಗುತ್ತಾರೆ. ಕಾವೇರಿ ನಿಸರ್ಗಧಾಮ ಕಾವೇರಿ ನದಿ ನಿರ್ಮಿತ ದ್ವೀಪವಾಗಿದ್ದು ಸುತ್ತಲೂ ನೀರು ಹರಿಯುತ್ತದೆ. ಈ ದ್ವೀಪಕ್ಕೆ ತೂಗು ಸೇತುವೆ ಮೂಲಕ ಸಾಗುವುದೇ ಮಜಾ.
ನಿಸರ್ಗಧಾಮಕ್ಕೆ ಕಳೆಕಟ್ಟಿದ್ದ ಬಿದಿರು ಮೆಳೆಗಳು ಕೆಲ ವರ್ಷಗಳ ಹಿಂದೆ ಹೂ ಬಿಟ್ಟು ನಾಶವಾಗಿದ್ದು, ಈಗಷ್ಟೆ ಹೊಸದಾಗಿ ಬಿದಿರುಗಿಡಗಳು ಹುಟ್ಟಿಕೊಳ್ಳುತ್ತಿವೆ. ಇವು ಬೆಳೆದು ನಿಲ್ಲಲು ಇನ್ನೂ ಕೆಲವು ವರ್ಷಗಳು ಬೇಕಾಗುತ್ತದೆ. ಆಗ ಮತ್ತೆ ಹಳೆಯ ವೈಭವ ಮರುಕಳಿಸಲಿದೆ. ಅಲ್ಲಿ ತನಕ ಇಲ್ಲಿಗೆ ತೆರಳಿದವರಿಗೆ ಬೋರ್ ಹೊಡೆಸುವುದಂತು ಗ್ಯಾರಂಟಿ.
ಈಗಾಗಲೇ ಇಲ್ಲಿ ಬಿದಿರು ಮೆಳೆಗಳು, ಕುರುಚಲು ಕಾಡುಗಳು ಒಣಗಿ ನಿಂತಿದ್ದು ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ತೂಗುಸೇತುವೆ ನವೀಕರಣ, ಮತ್ತೊಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದಾಗಿ ಸದ್ಯದ ಮಟ್ಟಿಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿರುವುದಾಗಿ ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರು ಮಾಹಿತಿ ನೀಡಿದ್ದಾರೆ. ಕಾವೇರಿ ನದಿಯಲ್ಲಿಯೂ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಪ್ರವಾಸಿಗರಿಗೆ ಮಜಾ ಸಿಗುತ್ತಿಲ್ಲ. ಇನ್ನೊಂದಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಖುಷಿಯನ್ನುಂಟು ಮಾಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಾಗಿದೆ.