ಚಾಮರಾಜನಗರ: ಚುನಾವಣೆ ಪ್ರಕ್ರಿಯೆಯನ್ನು ಪಾರದರ್ಶಕ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಚರ್ಚಿಸುವ ಸಲುವಾಗಿ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ನೀತಿ ಸಂಹಿತೆಯು ಈಗಾಗಲೇ ಜಾರಿಯಲ್ಲಿದೆ. ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗದಿಪಡಿಸಿರುವ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಚುನಾವಣಾ ಸಂದರ್ಭದಲ್ಲಿ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವಂತಿಲ್ಲ. ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿಗಳಾದ ಬಾವುಟ, ಕಟ್ಔಟ್ ನಿಲ್ಲಿಸುವಂತಿಲ್ಲ. ಭಿತ್ತಿಪತ್ರ ಅಂಟಿಸುವುದು, ಘೋಷಣೆ ಬರೆಯುವಂತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿ, ಕಟ್ಟಡ, ಕಾಂಪೌಂಡ್ ಇನ್ನಿತರೆಡೆ ಲಿಖಿತ ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿಗಳನ್ನು ಪ್ರದರ್ಶಿಸಬಾರದು. ಅನುಮತಿ ಪಡೆಯದೇ ಇರುವ ಪ್ರಚಾರ ಸಾಮಾಗ್ರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ ಎಂದರು.
ಮತಯಾಚನೆಯನ್ನು ಜಾತಿ, ಮತ ಮತ್ತು ಕೋಮು ಭಾವನೆಗಳ ಆಧಾರದ ಮೇಲೆ ಮಾಡುವಂತಿಲ್ಲ. ದೇವಾಲಯ, ಮಸೀದಿ, ಚರ್ಚ್ ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಗಳಾಗಿ ಬಳಸಬಾರದು. ಜಾತಿ ಸಮುದಾಯಗಳ ಮಧ್ಯೆ ಅಥವಾ ಮತಿಯ ಭಾಷಾ ಸಮೂಹಗಳ ಮಧ್ಯೆ ಇರುವ ವೈಮನಸ್ಸನ್ನು ಕೆರಳಿಸುವ, ದ್ವೇಷ ಹುಟ್ಟಿಸುವಂತಹ ಉದ್ವೇಗಕ್ಕೆ ಕಾರಣವಾಗುವಂತಹ ಚಟುವಟಿಕೆಗಳಲ್ಲಿ ತೊಡಗಬಾರದೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆ, ಸಮಾರಂಭ ನಡೆಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿ, ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಅವಶ್ಯವಾಗಿದೆ. ಅನುಮತಿ ನೀಡಲು ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ಧ್ವನಿವರ್ದಕ, ಪ್ರಚಾರ ಸಾಮಾಗ್ರಿ, ವಾಹನ ಬಳಕೆಗೆ ಅನುಮತಿ ಪಡೆಯಬೇಕು. ಇದಕ್ಕೆ ತಗಲಬಹುದಾದ ವೆಚ್ಚವನ್ನು ಅಭ್ಯಥರ್ಿಗಳ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ ಎಂದರು.
ಬೇರೆ ಅಭ್ಯರ್ಥಿಯ ಖಾಸಗಿ ನಡತೆ ಅಥವಾ ಶೀಲಗಳ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡುವಂತಿಲ್ಲ. ದೃಶ್ಯ ಮತ್ತು ಮುದ್ರಣ ಮಾಧ್ಯಮದ ಮೂಲಕ ಪ್ರಚಾರ ಮಾಡುವ ಮುನ್ನ ಜಿಲ್ಲಾ ವಾರ್ತಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ರಾಜಕೀಯ ಪಕ್ಷಗಳು ತಾರಾ ಪ್ರಚಾರಕರ ಹೆಸರು, ಹುದ್ದೆ ಇತರೆ ವಿವರಗಳ ಜೊತೆ ಪ್ರಚಾರ ಮಾಡುವ ದಿನಾಂಕ, ವೇಳೆ, ಸ್ಥಳದ ಬಗ್ಗೆ ಮಾಹಿತಿ ನೀಡಬೇಕು, ಮೆರವಣಿಗೆ, ಸ್ಥಳ, ವೇಳೆ, ಹಾದುಹೋಗುವ ಮಾರ್ಗಗಳ ಬಗ್ಗೆ ಮುಂಚಿತವಾಗಿ ತಿಳಿಸಿರಬೇಕು. ಸಭೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪ್ರಚಾರ ಸಾಮಾಗ್ರಿಗಳನ್ನು ಅಳವಡಿಸಬೇಕು. ಸಭೆ ಮುಕ್ತಾಯವಾದ ಎರಡು ಗಂಟೆಯೊಳಗೆ ತೆರವುಗೊಳಿಸಬೇಕು ಎಂದರು.
ಶಾಂತಿಯುತ ಚುನಾವಣೆ ನಡೆಸಲು ಹಾಗೂ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡ, ವೆಚ್ಚ ಪರಿಶೀಲನಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 11 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಗಂಗಾಧರ ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮರಿಸ್ವಾಮಿ, ಸಿ.ಎಂ.ಕೃಷ್ಣಮೂರ್ತಿ, ಆರ್.ಎಲ್.ನಾಗೇಂದ್ರ ಬಾಬು, ಸುಂದರ್ ರಾಜ್, ಮಹೇಶ್, ಬ್ಯಾಡಮೂಡ್ಲು ಬಸವಣ್ಣ ಇತರರು ಸಭೆಯಲ್ಲಿ ಹಾಜರಿದ್ದರು.