ಹನೂರು: ಅಭಿಮಾನಿಗಳು ಮತ್ತು ಬೆಂಬಲಿಗರ ಒತ್ತಾಯದ ಮೇರೆಗೆ ಯಾವುದೇ ರೀತಿಯ ಷರತ್ತಿಲ್ಲದೆ ಮಲೆಮಹದೇಶ್ವರಬೆಟ್ಟದಲ್ಲಿ ಗುರುವಾರ ಬಿಜೆಪಿ ಪಕ್ಷಕ್ಕೆ ಸೇಡೆಯಾಗುತ್ತಿರುವುದಾಗಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದ್ದಾರೆ.
ಹನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ದಿ ಹಾಗೂ ಸರ್ವ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇರುವುದು ದೇಶ ಪ್ರದಾನಿ ಮಂತ್ರಿ ನರೇಂದ್ರ ಮೋದಿಗೆ ಮಾತ್ರ. ಅವರ ಕಾರ್ಯವೈಖರಿ ಮತ್ತು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸಬೇಕು ಹನೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯಾಗಬೇಕು ಎಂಬ ಹಿನ್ನಲೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದರು.
ಇತ್ತೀಚೆಗೆ ನಡೆದ ಯುಪಿ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ರೀತಿಯಲ್ಲಿ ಅಲ್ಪಸಂಖ್ಯಾತರು ಬೆಂಬಲ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಹನೂರು ಕ್ಷೇತ್ರದ ಅಲ್ಪಸಂಖ್ಯಾತರು ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಕುರಟ್ಟಿ ಹೊಸೂರು ಗ್ರಾ.ಪಂ ವ್ಯಾಪ್ತಿಯ ದಂಟಳ್ಳಿ ಗ್ರಾಮದಲ್ಲಿ ನೀರು ಮೇವಿಲ್ಲದೆ ಸತ್ತ ಜಾನುವಾರುಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚಿದೆ. ಆದರೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರಾದ ನರೇಂದ್ರ ಹಾಗೂ ಜಿಲ್ಲಾಧಿಕಾರಿಗಳು ಅನಾರೋಗ್ಯದ ಕಾರಣ ಮೂರು ಜಾನುವಾರು ದಂಟಳ್ಳಿಯಲ್ಲಿ ಸತ್ತಿದೆ ಎಂಬ ಹೇಳಿಕೆ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಬೇಕಿದ್ರೆ ಜಿಲ್ಲಾಧಿಕಾರಿಗಳೇ ಖುದ್ದು ಗ್ರಾಮಕ್ಕೆ ಭೇಟಿ ನೀಡಲಿ, ಗ್ರಾಮದ ಜಮೀನಿನಲ್ಲಿ ಸತ್ತುಬಿದ್ದಿರುವ ಹತ್ತು ಜಾನುವಾರುಗಳನ್ನು ನಾನು ವೀಕ್ಷಿಸಿದ್ದೇನೆ ಇದಲ್ಲದೇ ಕಾಡಿಗೆ ಮೇವಿಗೆ ಹೋದ 20 ಕ್ಕೂ ಹೆಚ್ಚು ರಾಸುಗಳು ಅಸು ನೀಗಿವೆ ಎಂದು ದೂರಿದರು.
ಸ್ಥಳೀಯ ಸಮಸ್ಯೆಗಳ ನಿವಾರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಸಮರ್ಪಕ ಬರ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ ಹನೂರಿನಲ್ಲಿ ಕುಡಿಯುವ ನೀರಿಗೂ ಬವಣೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ, ಹನೂರು ಕ್ಷೇತ್ರ ಕಳೆದ 8 ವರ್ಷಗಳಿಂದಲೂ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.