ಮಡಿಕೇರಿ: ಕರ್ನಾಟಕದ ಮುಕುಟಮಣಿ ಕೊಡಗಿನ ಅಪ್ರತಿಮ ಪ್ರಕೃತಿಯ ಮಡಿಲಲ್ಲಿ ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಕಾಡಿನ ಮಕ್ಕಳ ಅನುಪಮ ಕಲೆಯ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಪರಿಚಯಿಸಬೇಕೆಂಬ ಸದುದ್ದೇಶದಿದಂದ ಕಳೆದ ನಾಲ್ಕು ವರ್ಷಕ್ಕೆ ಹಿಂದೆ ನಗರದ ಆಕಾಶವಾಣಿ ಕೇಂದ್ರವು ಕಾಡಿನ ಮಕ್ಕಳ ರೇಡಿಯೋ ಹಬ್ಬ ಎಂಬ ಕಾರ್ಯಕ್ರಮವೊಂದನ್ನು ನಡೆಸಿಕೊಂಡು ಬರುತ್ತಿದೆ.
ಕೊಡಗಿನ ಹಿರಿಯರು ತಮ್ಮ ಮುಂದಾಲೋಚನೆಯ ಫಲವಾಗಿ ಉಳಿಸಿ ಬೆಳೆಸಿದ ದೇವರಕಾಡುಗಳು ಸೇರಿದಂತೆ ಕೊಡಗಿನ ಪ್ರಾಕೃತಿಕ ಸುಸಂಪನ್ನತೆಯ ಫಲವಾಗಿಯೇ ಕಾವೇರಿ ಇಂದಿಗೂ ಮೈದುಂಬಿ ಹರಿಯುತ್ತಾಳೆ. ನಿತ್ಯ ಹರಿದ್ವರ್ಣ ಕಾಡುಗಳು, ಶೋಲಾ ಅರಣ್ಯ, ಸಂರಕ್ಷಿತ ಅರಣ್ಯಗಳು, ನೆಡುತೋಪುಗಳು, ಸಾಮಾಜಿಕ ಅರಣ್ಯಗಳು, ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ಹರಿಯುವ ತೋಡುತೊರೆಗಳಿಗೆ ಜನ್ಮ ನೀಡುತ್ತಾ ಕಾವೇರಿಯ ಒಡಲು ಸೇರುತ್ತವೆ.
ಈ ಕಾಡುಗಳ ಒಡಲಲ್ಲಿ ಪರಂಪರೆಯಿಂದಲೂ ವಿಶಿಷ್ಟ ಸಂಸ್ಕೃತಿಯ ವಿಭಿನ್ನ ಬುಡಕಟ್ಟು ಜನಾಂಗಗಳು ತಮ್ಮ ಅಮೂಲ್ಯ ಸಾಂಸ್ಕೃತಿಕ ಸೊಬಗನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿವೆ. ಒಂದೆಡೆ ಪಣಿ ಯರವ, ಪಂಜರಿ ಯರವ, ಕಾಡು ಕುರುಬ, ಬೆಟ್ಟ ಕುರುಬ, ಜೇನು ಕುರುಬ, ಸೋಲಿಗ ಇತ್ಯಾದಿ ಬುಡಕಟ್ಟು ಜನಾಂಗಗಳು ತಮ್ಮ ವೈವಿಧ್ಯಮಯ ಕಲಾಪ್ರಕಾರಗಳಿಂದಲೇ ತಮ್ಮ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದ್ದರೆ, ಇನ್ನೊಂದೆಡೆ ಕೊಡಗಿನ ಮೂಲ ನಿವಾಸಿಗಳಾದ ಕೊಡವ, ಕುಡಿಯ, ಕೆಂಬಟ್ಟಿ, ಮೇದ ಸೇರಿದಂತೆ ಕೊಡವ ಭಾಷಿಕ ಜನಾಂಗಗಳು, ಮತ್ತು ಇತರೆ ಜನಾಂಗಗಳು ತಮ್ಮ ಜನಪದ ಶ್ರೀಮಂತಿಕೆಯ ಪ್ರತೀಕವಾಗಿ ಕೊಡಗಿನ ಬೆಡಗಿಗೆ ಕಾರಣೀಭೂತರಾಗಿದ್ದಾರೆಂದರೆ ತಪ್ಪಾಗದು.
ಕೊಡಗಿನ ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯೊಂದಿಗೆ ಸಂಸ್ಕೃತಿ ಉಳಿಸಿಕೊಂಡು ಎಲ್ಲಾ ಕಲಾ ವೈಭವ ಮೈದಾಳಿದೆ. ಇಲ್ಲಿನ ನೆಲ, ಜಲ, ಮಣ್ಣು, ಗಾಳಿಯನ್ನು ಮೈಗೂಡಿಸಿಕೊಂಡೇ ಅವುಗಳ ಮೇಲಿನ ಮಮತೆ ಮಾಸದಂತೆ ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡಿವೆ ಕೂಡಾ.
ಬಹುಶಃ ಯಾವುದೇ ಕಾರ್ಯದ ಹಿಂದಿನ ಸದುದ್ದೇಶ ಆ ಕಾರ್ಯವನ್ನು ಜನಪ್ರಿಯ ಗೊಳಿಸುತ್ತವೆ ಎಂಬುದಕ್ಕೆ ಕಾಡಿನ ಮಕ್ಕಳ ರೇಡಿಯೋ ಹಬ್ಬ ಎಂಬ ಜಿಲ್ಲಾಮಟ್ಟದ ಕಾರ್ಯಕ್ರಮವೊಂದು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಿ ದೇಶದ ಕಲಾ ಉತ್ಸವವಾಗಿ, ಕಾಡಿನ ಮಕ್ಕಳ ಹಬ್ಬ ಎಂಬ ನಾಮಧೇಯದೊಂದಿಗೆ ನಿಮ್ಮೆದುರು ಬರುತ್ತಿದೆ. ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು, ಆಕಾಶವಾಣಿ ಮಡಿಕೇರಿ ಇವರ ಸಹಯೋಗದಲ್ಲಿ ಕೊಡಗು ಜಿಲ್ಲಾಡಳಿತ ನಗರಸಭೆ ಮಡಿಕೇರಿ ಇವರ ಸಹಕಾರದೊಂದಿಗೆ ಇದೇ ಮಾರ್ಚ್ 17,18,19 ರಂದು ನಗರದ ಗಾಂಧಿ ಮೈದಾನದಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ಕಾಡಿನ ಮಕ್ಕಳ ಹಬ್ಬ-2017 ಅನಾವರಣಗೊಳ್ಳಲಿದೆ.
ಕೊಡಗಿನ ಬುಡಕಟ್ಟು ಜನಾಂಗ, ಮೂಲ ನಿವಾಸಿ ಕಲಾತಂಡಗಳು, ರಾಜ್ಯದ ಜನಪದ ಕಲಾತಂಡಗಳು ಸೇರಿದಂತೆ ದೇಶಾದ್ಯಂತ ನೆಲೆಸಿರುವ ಬೇರೆ ಬೇರೆ 30 ಕಲಾತಂಡಗಳ ಸುಮಾರು 400 ಕಲಾವಿದರು ತಮ್ಮ ವೈವಿಧ್ಯಮಯ ಪ್ರದರ್ಶನ ನೀಡಲಿದ್ದಾರೆ. ಜಾಗತಿಕ ತಾಪಮಾನದ ಏರಿಳಿತ, ಪರಿಸರ ಮಾಲಿನ್ಯದಿಂದಾಗಿ ಓಝೋನ್ ಪದರಕ್ಕೆ ಹಾನಿ ತನ್ಮೂಲಕ ಭೂಗ್ರಹ ನಿವಾಸಿಗಳ ಮುಂದಿನ ಭವಿಷ್ಯ ಅಪಾಯದಲ್ಲಿರುವ ಈ ಸಂದರ್ಭದಲ್ಲಿ, ಕಾಡಿನ ಮಕ್ಕಳ ಕಾಡಿನ ಮೇಲಿನ ಪ್ರೀತಿಯ ಪ್ರತೀಕವಾಗಿ ರೂಪುಗೊಂಡಿರುವ ಅವರ ಕಲೆಯನ್ನು ಪ್ರಚುರಪಡಿಸುವ ಮೂಲಕ ಕಾಡಿಲ್ಲದೆ ನಾಡಿಲ್ಲ ಎಂಬ ಮಹತ್ತರ ಸಂದೇಶವನ್ನು ಜನತೆಯೆದುರು ತೆರೆದಿಡುವುದೇ ಕಾಡಿನ ಮಕ್ಕಳ ಹಬ್ಬ -2017 ಇದರ ಮೂಲ ಉದ್ದೇಶ. ಸಹೃದಯಿ ಕಲಾ ರಸಿಕರಾದ ಜನತೆ ಕಲೆಯನ್ನು ಆಸ್ವಾದಿಸುವ ಮೂಲಕ ದೇಶದ ನೆಲ, ಜಲ, ಮಣ್ಣು, ಗಾಳಿಯನ್ನು ಸ್ವಚ್ಛವಾಗಿಡುವ ಪಣ ತೊಟ್ಟು ಸ್ವಚ್ಛ ಭಾರತ ಪರಿಕಲ್ಪನೆಗೆ ಕೈಜೋಡಿಸಿದಲ್ಲಿ ಶ್ರಮ ಸಾರ್ಥಕವಾದೀತು.