ಗುಂಡ್ಲುಪೇಟೆ: ಬೇಸಿಗೆಯ ಬೇಗೆಯಲ್ಲಿ ದಣಿವನ್ನು ನಿವಾರಿಸಿಕೊಳ್ಳುವ ಸಲುವಾಗಿ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕಾಟಿಯನ್ನು ಅರಣ್ಯ ಸಿಬ್ಬಂದಿ ಕಾಪಾಡಿರುವ ಘಟನೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೆರೆಯೊಂದರಲ್ಲಿ ನಡೆದಿದೆ.
ರಾಷ್ಟ್ರೀಯ ಬಂಡೀಪುರ ಉದ್ಯಾನ ಹಾಗೂ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಸಮೀಪದ ಹಿರಿಕೆರೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ವಾರ ಮಳೆಬಿದ್ದ ಪರಿಣಾಮ ಹಿರಿಕೆರೆಯಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ಮೇವಿನ ಕೊರತೆಯಿಂದ ನಿತ್ರಾಣವಾಗಿದ್ದ ಸುಮಾರು 25 ವರ್ಷ ವಯಸ್ಸಿನ ಗಂಡು ಕಾಟಿ ಮಂಗಳಾರ ರಾತ್ರಿ ನೀರನ್ನು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿತ್ತು. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಹಗ್ಗ ಬಳಕೆ ಮಾಡಿ ಕಾರ್ಯಾಚರಣೆ ನಡೆಸಿ ಕಾಟಿಯನ್ನು ರಕ್ಷಿಸಿದರು. ಕಾರ್ಯಾಚರಣೆಯಲ್ಲಿ ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎ.ಮರಡಿಮನಿ, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.