ಮಂಡ್ಯ: ಸಕ್ಕರೆನಾಡು ಮಂಡ್ಯ ಕಳೆದ ಕೆಲವು ವರ್ಷಗಳಿಂದ ಬರಕ್ಕೆ ಸಿಕ್ಕಿ ತತ್ತರಿಸಿದ್ದು ನೂರಾರು ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಜಿಲ್ಲೆಗೆ ಬಜೆಟ್ ನಲ್ಲಿ ಆದ್ಯತೆ ನೀಡಬಹುದೆಂದು ನಂಬಿದ ಜನಕ್ಕೆ ನಿರಾಸೆಯಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಜನ ರೈತರು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಜಿಲ್ಲೆಗೆ ಆದ್ಯತೆ ನೀಡಿ ರೈತರಿಗೆ ಉಪಯೋಗವಾಗುವ ಯೋಜನೆಯೊಂದನ್ನು ಜಾರಿಗೆ ತರಬಹುದೆಂದು ಹೆಚ್ಚಿನ ರೈತರು ನಂಬಿದ್ದರು. ಅಲ್ಲದೆ ಸಾಲ ಮನ್ನಾ ಮಾಡುತ್ತಾರೆ ಎಂಬುದು ಬಹುತೇಕ ರೈತರ ನಿರೀಕ್ಷೆಯಾಗಿತ್ತು. ಆದರೆ ಸಾಲಮನ್ನಾ ಕುರಿತಂತೆಯಾಗಲೀ, ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆಯಾಗಲೀ ಮಾತನಾಡದೆ ಇದ್ದಾಗ ಕೆಲವು ರೈತರು ಆಕ್ರೋಶಗೊಂಡಿದ್ದರೆ ಮತ್ತೆ ಕೆಲವರು ಸಂಪೂರ್ಣ ಕುಸಿದು ಹೋಗಿದ್ದರು. ಮಂಡ್ಯಕ್ಕೆಂದು ಮುಖ್ಯಮಂತ್ರಿಗಳು ಯಾವುದೇ ರೀತಿಯ ಭರವಸೆ ಮೂಡಿಸುವ ಪರಿಣಾಮಕಾರಿಯಾದ ಯೋಜನೆ ಪ್ರಕಟಿಸದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಈ ಹಿಂದಿನ ಬಜೆಟ್ ನಲ್ಲಿ ಮಂಡ್ಯದ ಅಭಿವೃದ್ಧಿಗೆ ಒಂದಷ್ಟು ಆದ್ಯತೆಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದಕ್ಕೆ ರಾಜಕೀಯ ಕಾರಣಗಳು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿ, ಸಚಿವರಾಗಿ, ಇದೀಗ ಕೇವಲ ಶಾಸಕರಾಗಿ ಉಳಿದಿರುವ ಅಂಬರೀಶ್ ಅವರು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮೌನಕ್ಕೆ ಶರಣಾಗಿದ್ದು, ಬೆಂಗಳೂರಲ್ಲೇ ನೆಲೆಯೂರಿ ಬಿಟ್ಟಿದ್ದಾರೆ. ಉಳಿದಂತೆ ಜೆಡಿಎಸ್ನ ಶಾಸಕರ ಪೈಕಿ ಕೆಲವರು ಪಕ್ಷದಿಂದ ಹೊರಗಿದ್ದಾರೆ. ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರದ ಮೇಲೆ ಒತ್ತಡ ಹೇರುವ ಯಾವ ಜನಪ್ರತಿನಿಧಿಗಳು ಕೂಡ ಮಂಡ್ಯದಲ್ಲಿ ಕಾಣುತ್ತಿಲ್ಲ. ಹೀಗಾಗಿ ಬೆಂಗಳೂರಿಗೆ ಸಮೀಪವಿರುವ ಮಂಡ್ಯದ ಮಣ್ಣಿನ ಮಕ್ಕಳ ಸಮಸ್ಯೆ ಮುಖ್ಯಮಂತ್ರಿಗಳಿಗೆ ಕಾಣಿಸಿಲ್ಲ ಎನ್ನಬಹುದೇನೋ?
ಮಂಡ್ಯದ ಪ್ರಭಾವಿ ನಾಯಕರಾದ ಎಸ್.ಎಂ.ಕೃಷ್ಣ ಬಿಜೆಪಿ ಸೇರುವುದು ಖಚಿತವಾಗಿದೆ. ಇನ್ನು ಅಂಬರೀಶ್ ಅವರು ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುವ ಲಕ್ಷಣಗಳು ಈಗಾಗಲೇ ಕಂಡು ಬರುತ್ತಿದ್ದು, ಇದೀಗ ಬಜೆಟ್ ನಲ್ಲಿಯೂ ನಿರ್ಲಕ್ಷ್ಯ ವಹಿಸಿರುವುದು ರೈತಾಪಿ ಜನರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಇದರ ಪರಿಣಾಮಗಳು ಯಾವ ರೀತಿಯಲ್ಲಿ ಬೀರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.