ಚಾಮರಾಜನಗರ: ಎಷ್ಟೇ ಜಾಗ್ರತೆ ವಹಿಸಿದರೂ ಬಂಡೀಪುರ ಉದ್ಯಾನವನ್ನು ಅಗ್ನಿ ಅನಾಹುತದಿಂದ ರಕ್ಷಿಸಿಕೊಳ್ಳುವುದು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಇತ್ತೀಚೆಗೆ ಬಿದ್ದ ಬೆಂಕಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗಿರುವುದು ಸಾಕ್ಷಿಯಾಗಿದೆ. ಅರಣ್ಯಾಧಿಕಾರಿಗಳು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ್ಯಾವುದೂ ಇಲ್ಲಿ ಉಪಯೋಗಕ್ಕೆ ಬಾರದಿರುವುದು ಸ್ಪಷ್ಟವಾಗಿದೆ.
ಬಂಡೀಪುರ ಅರಣ್ಯ ಬೆಂಕಿಯಿಂದ ಹೊತ್ತಿ ಉರಿಯುವುದು ಪ್ರತಿ ವರ್ಷವೂ ನಡೆಯುತ್ತಲೇ ಇದೆ. ಎಷ್ಟೇ ಪ್ರಯತ್ನ ಪಟ್ಟರೂ ಇದನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಿದೆ. ಅರಣ್ಯ ಸಿಬ್ಬಂದಿ ಕೊರತೆ, ಇರುವ ದಿನಗೂಲಿ ನೌಕರರಿಗೆ ಸಮರ್ಪಕ ಸೌಲಭ್ಯ ನೀಡದಿರುವುದು, ಆಧುನಿಕ ಉಪಕರಣಗಳನ್ನು ಒದಗಿಸದಿರುವುದು ಹೀಗೆ ಪಟ್ಟಿಗಳು ಬೆಳೆಯುತ್ತಾ ಹೋಗುತ್ತದೆ. ಬಂಡೀಪುರ 13 ಅರಣ್ಯ ವಲಯಗಳನ್ನು ಹೊಂದಿದ್ದು, ಹುಲಿ ಯೋಜನೆ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಹೆಚ್ಚಿನ ಸಿಬ್ಬಂದಿಗಳ ಅಗತ್ಯತೆಯಿದೆ. ಅದರಲ್ಲೂ ಬೇಸಿಗೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಇಲ್ಲಿಗೆ ಕನಿಷ್ಟ 341 ಖಾಯಂ ನೌಕರರ ಅವಶ್ಯಕತೆಯಿದೆ. ಆದರೆ ಸದ್ಯ 221 ನೌಕರರಿಂದಲೇ ಕಾರ್ಯ ನಿರ್ವಹಿಸಲಾಗುತ್ತಿದೆ. ಇರುವ ನೌಕರರಲ್ಲಿ ಹೆಚ್ಚಿನವರು ದಿನಗೂಲಿ ನೌಕರರೇ. ಹೀಗಾಗಿ ಸಮರ್ಪಕ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ.
ಇನ್ನು ಇರುವ ದಿನಗೂಲಿ ನೌಕರರನ್ನು ಮೇಲಾಧಿಕಾರಿಗಳು ಮಾನವೀಯ ದೃಷ್ಠಿಯಿಂದ ನೋಡುತ್ತಾರಾ ಎಂದು ಕೇಳಿದರೆ ಅದಕ್ಕೆ ಇಲ್ಲ ಎಂಬ ಉತ್ತರವೇ ಸಿಗುತ್ತದೆ. ಸರಿಯಾದ ಸಮಯಕ್ಕೆ ವೇತನ ಸಿಗೋದಿಲ್ಲ ಎಂಬ ಅಳಲು ಕೇಳಿ ಬರುತ್ತದೆ. ಸುಮಾರು 35 ಸಿಬ್ಬಂದಿ ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಕೇವಲ ಹತ್ತೋ ಹದಿನೈದೋ ಸಿಬ್ಬಂದಿಯಿಂದ ಕೆಲಸ ಮಾಡಿಸಲಾಗುತ್ತದೆ. ಇದರ ಮಧ್ಯೆ ಕನಿಷ್ಠ ಸಿಬ್ಬಂದಿಯಿಂದ ಕೆಲಸ ಮಾಡಿಸಿ ಗರಿಷ್ಠ ಸಿಬ್ಬಂದಿಯ ದಾಖಲೆ ಸೃಷ್ಠಿಸಿ ಗುಳುಂ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಯಾರೂ ಮುಂದಾಗದ ಕಾರಣದಿಂದ ಮುಚ್ಚಿ ಹೋಗುತ್ತಿದೆ. ಎಲ್ಲ ಕೆಲಸವನ್ನು ದಿನಗೂಲಿ ನೌಕರರಿಂದಲೇ ಮಾಡಿಸಲಾಗುತ್ತದೆ ಎಂಬ ಅಳಲು ಇಲ್ಲಿನವರದ್ದಾಗಿದೆ. ಜತೆಗೆ ರಜೆ ನೀಡದೆ ಶೋಷಣೆ, ಬೆಂಕಿ ಬಿದ್ದರೂ ಇವರ ಮೇಲೆಯೇ ಅನುಮಾನ ಪಡುವುದು, ಕೆಲವು ಮೇಲಾಧಿಕಾರಿಗಳಂತು ನಿಕೃಷ್ಟವಾಗಿ ನೋಡುವುದಲ್ಲದೆ, ಕೆಟ್ಟ ಪದಗಳಿಂದ ಕರೆಯುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಎರಡು ಪಾಳಿಯಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರುವುದು, ಒಪ್ಪದಿದ್ದರೆ ಕೂಲಿ ನೀಡದೆ ಸತಾಯಿಸುವುದು ಹೀಗೆ ಹಲವು ಶೋಷಣೆಗಳು ನಡೆಯುತ್ತವೆ ಆದರೆ ಈ ಬಗ್ಗೆ ಬಾಯಿಬಿಟ್ಟರೆ ತಮಗೆ ಸಂಕಷ್ಟ ಎದುರಾಗಿ ಬಿಡುತ್ತೋ ಎಂಬ ಭಯದಿಂದ ತೆಪ್ಪಗೆ ಕುಳಿತುಕೊಳ್ಳಬೇಕಾದ ಸ್ಥಿತಿ ದಿನಗೂಲಿ ನೌಕರರದ್ದಾಗಿದೆ.
ಇಲ್ಲಿನ ಮತ್ತೊಂದು ದುರಂತ ಏನೆಂದರೆ ಹುಲಿಯೋಜನೆಗೆ ಅರಣ್ಯ ಒಳಪಡುವುದರಿಂದ ಗಸ್ತು ತಿರುಗಲೆಂದೇ ಎಸ್ಟಿಎಫ್ ಸಿಬ್ಬಂದಿ ಇದ್ದಾರೆ. ಆದರೆ ಇವರನ್ನು ಸಫಾರಿ ಟಿಕೆಟ್ ಕೌಂಟರ್ ಹಾಗೂ ಕಚೇರಿಯ ಇತರೆ ಕೆಲಸಗಳಿಗೆ ಬಳಕೆಮಾಡಿಕೊಳ್ಳಲಾಗುತ್ತಿರುವುದು ಕಂಡು ಬರುತ್ತಿದೆ. ಇದರ ಜತೆಗೆ ಅರಣ್ಯದಲ್ಲಿ ನಡೆಯುವ ಕಳ್ಳಬೇಟೆ ತಡೆಗಟ್ಟುವ ಸಲುವಾಗಿ ಸಿಬ್ಬಂದಿಗೆ ಸಂಪರ್ಕ ನೀಡಲು ಅನುಕೂಲವಾಗುವಂತೆ ಹೆಜ್ಜೆ ಹೆಸರಿನ ಸಾಫ್ಟ್ವೇರ್ ಹೊಂದಿರುವ ಮೊಬೈಲುಗಳನ್ನು ನೀಡಲಾಗಿದೆಯಾದರೂ ಅದು ಉಪಯೋಗಕ್ಕೆ ಬಾರದೆ ನಿಷ್ಕ್ರಿಯವಾಗಿವೆ. ಇದರ ಪರಿಣಾಮ ಅರಣ್ಯದಲ್ಲಿ ಏನೇ ನಡೆದರೂ ಅದು ಸಕಾಲದಲ್ಲಿ ತಲುಪುತ್ತಿಲ್ಲ. ಅಷ್ಟೇ ಅಲ್ಲ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳಿಗೂ ಅಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಒಟ್ಟಾರೆ ಹಲವು ಸಮಸ್ಯೆಗಳು ಬಂಡೀಪುರವನ್ನು ಕಾಡುತ್ತಿದ್ದು, ಅದರಲ್ಲೂ ಅರಣ್ಯದಲ್ಲಿ ಹಗಲಿರುಳು ದುಡಿಯುವ ದಿನಗೂಲಿ ನೌಕರರು ಸೇರಿದಂತೆ ಅರಣ್ಯ ಸಿಬ್ಬಂದಿಯ ಬದುಕು ಅರಣ್ಯರೋದನವಾಗಿರುವುದಂತು ಸತ್ಯ.