ಯಳಂದೂರು: ಪುರಾತನ ವಸ್ತುವೊಂದು ತಮ್ಮ ಬಳಿಯಿದ್ದು ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುತ್ತದೆ ಎಂದು ನಂಬಿಸಿ ಮಾರಾಟ ಮಾಡಲೆತ್ನಿಸುತ್ತಿದ್ದ ಐವರ ಪೈಕಿ ನಾಲ್ವರು ಖದೀಮರನ್ನು ಯಳಂದೂರು ಪೊಲೀಸರು ಬಂಧಿಸಿದ್ದು ಒಬ್ಬ ತಪ್ಪಿಸಿಕೊಂಡಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಅಜ್ಜಿಪುರ ಗ್ರಾಮದ ರಾಜೇಶ್, ಕಾಮಗೆರೆ ಗ್ರಾಮದ ಶಿವು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ರುಕ್ಮಯ್ಯಪೂಜಾರಿ, ಮೈಸೂರಿನ ಜಯಲಕ್ಷ್ಮೀಪುರಂನ ಆಶಿತ್ ತಿಮ್ಮಪ್ಪಶೆಟ್ಟಿ ಬಂಧಿತರು. ಶಿವು ಹಾಗೂ ರಾಜೇಶ್ ಎಂಬುವವರು ಸುಮಾರು 1 ರಿಂದ 1.1/2 ಅಡಿ ಉದ್ದದ ಅಳತೆಯ ಕಂಚಿನಂತಿರುವ ಬಣ್ಣವನ್ನು ಹೊಂದಿರುವ ಮೇಲ್ಭ್ಬಾಗದಲ್ಲಿ ರಾಯಲ್ ನಾವಿ ಟೆಲಿಸ್ಕೋಪ್ ಲಂಡನ್-1915 ಎಂದು ಬರೆದಿರುವ ಪುರಾತನ ಕಾಲದ ಹಳೆಯ ವಸ್ತುವೊಂದು ಲಕ್ಷಾಂತರ ಬೆಲೆ ಬಾಳುತ್ತಿದ್ದು ಇದನ್ನು ಕೇವಲ 5 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತೇವೆ. ಇದನ್ನು ಬೇರೆಡೆ ಮಾರಾಟ ಮಾಡಿದರೆ ಕೋಟ್ಯಂತರ ಹಣ ಸಿಗುತ್ತದೆ ಎಂದು ನಂಬಿಸಿ ರುಕ್ಮಯ್ಯಪೂಜಾರಿ ಹಾಗೂ ಆಶಿತ್ ತಿಮ್ಮಪ್ಪಶೆಟ್ಟಿಯನ್ನು ಪಟ್ಟಣದ ನಾಡಮೇಗಲಮ್ಮನ ದೇವಸ್ಥಾನದ ಬಳಿ ಕರೆಸಿಕೊಂಡಿದ್ದಾರೆ.
ಇದನ್ನು ನಂಬಿದ ಅವರಿಬ್ಬರು ಆ ವಸ್ತುವನ್ನು ಕೊಂಡುಕೊಳ್ಳಲು ಬಂದಿದ್ದಾರೆ. ಖಚಿತ ಮಾಹಿತಿ ಅನ್ವಯ ಸಬ್ಇನ್ಸ್ಪೆಕ್ಟರ್ ಮಂಜುರವರು ಸಿಬ್ಬಂದಿಯೊಂದಿಗೆ ಮರೆಯಲ್ಲಿ ಅವಿತು ಕುಳಿತ್ತಿದ್ದಾರೆ. ಈ ವೇಳೆ 5 ಜನರು ಪುರಾತನ ವಸ್ತುವನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ದಾಳಿ ನಡೆಸಿದ್ದು ನಾಲ್ವರನ್ನು ಬಂಧಿಸಲಾಗಿದೆ. ಸೋಮಣ್ಣ ಎಂಬಾತ ತಪ್ಪಿಸಿಕೊಂಡಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ರಾಜೇಶ್ ಎಂಬಾತ ಪುರಾತನ ಕಾಲದ ವಸ್ತುವನ್ನು ಬೆಂಗಳೂರಿನ ಸಂಡೆ ಬಜಾರ್ ನಲ್ಲಿ 5 ಸಾವಿರ ರೂ.ಗಳಿಗೆ ಖರೀದಿಸಿದ್ದನು ಬಾಯ್ಬಿಟ್ಟಿದ್ದು, ಅದನ್ನಿಟ್ಟುಕೊಂಡು ವಂಚಿಸುವ ಕೃತ್ಯಕ್ಕೆ ಮುಂದಾಗಿದ್ದನ್ನು ಒಪ್ಪಿಕೊಂಡಿದ್ದಾನೆ. ಇದೀಗ ಪೊಲೀಸರು ತಪ್ಪಿಸಿಕೊಂಡಿರುವ ಸೋಮಣ್ಣನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಮಂಜು, ಸಿಬ್ಬಂದಿ ಮಲ್ಲಿಕಾರ್ಜುನ, ವೆಂಕಟೇಶ್, ರಾಘವೇಂದ್ರ, ಗುರುಲಿಂಗಶೆಟ್ಟಿ, ರಮೇಶ್ ಇದ್ದರು.