ಗುಂಡ್ಲುಪೇಟೆ: ಕ್ಷೇತ್ರದ ಬಗ್ಗೆ ಸಂಪೂರ್ಣ ಅರಿವಿರುವ ತನ್ನ ಪತಿ ಸಿ.ಎಸ್.ನಿರಂಜನಕುಮಾರ್ ಅವರನ್ನು ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಲು ಮತದಾರರು ಸಹಕಾರ ನೀಡುವಂತೆ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪತ್ನಿ ಸವಿತಾ ಪ್ರಚಾರ ನಡೆಸಿ ಮತದಾರರಲ್ಲಿ ಮನವಿ ಮಾಡಿದರು.
ಗುಂಡ್ಲುಪೇಟೆ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪರವಾಗಿ ಅಂಗಡಿ ಬೀದಿ ಹಾಗೂ ಮನೆಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಆರಂಭಿಸಿದ ಅವರು ಕ್ಷೇತ್ರದಲ್ಲಿ ಸತತವಾಗಿ ನನ್ನ ಪತಿ ಸಿ.ಎಸ್.ನಿರಂಜನಕುಮಾರ್ ಅವರು ಕಳೆದ ಎರಡು ಬಾರಿ ಮತ್ತು ನನ್ನ ಮಾವ ಸಿ.ಎಂ.ಶಿವಮಲ್ಲಪ್ಪ ಅವರು ಹಿಂದಿನ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಈ ಅನುಕಂಪ ನನ್ನ ಪತಿಯ ಮೇಲಿರಿಸಿ ಈ ಬಾರಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಬೇಕೆಂದು ಮತದಾರರಲ್ಲಿ ವಿನಂತಿಸಿದರು.
ಆದರೆ ಈ ಬಾರಿ ಕ್ಷೇತ್ರದೆಲ್ಲೆಡೆ ಬಿಜೆಪಿಯ ಪರ ಒಲವಿದ್ದು, ಅನೇಕ ಜನರು ಬಿ.ಜೆ.ಪಿ. ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ಬಿ.ಜೆ.ಪಿ. ಕ್ಷೇತ್ರದಲ್ಲಿ ಬಲಿಷ್ಟವಾಗಿದೆ. ಸತತ ಸೋಲನ್ನು ಕಂಡಿರುವ ನನ್ನ ಪತಿಯು ಕ್ಷೇತ್ರದ ಇಂಚಿಂಚೂ ಅರಿವನ್ನು ಹೊಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳ ನಿವಾರಣೆಯ ಬಗ್ಗೆ ಸ್ಥಳೀಯರೊಂದಿಗೆ ಸೇರಿ ಹೋರಾಟ ನಡೆಸಿದ್ದಾರೆ. ಆ ಮೂಲಕ ಕ್ಷೇತ್ರದ ಜನರ ಕಷ್ಟವನ್ನು ಅರಿತಿದ್ದಾರೆ. ಈ ಬಾರಿ ತಾವು ಅವರನ್ನು ಬೆಂಬಲಿಸಿ ಆಶೀರ್ವದಿಸಿ ಕಳುಹಿಸಿದರೆ, ಕ್ಷೇತ್ರದಲ್ಲಿನ ಸಮಸ್ಯೆಗಳಾದ ಕುಡಿಯುವ ನೀರು, ಸಮರ್ಪಕ ರಸ್ತೆ, ಸಾರಿಗೆ ವ್ಯವಸ್ಥೆ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸೇರಿದಂತೆ ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರತ್ನಮ್ಮ ಶ್ರೀಕಂಠಪ್ಪ, ಪುರಸಭೆ ಸದಸ್ಯ ಎಸ್.ಗೋವಿಂದರಾಜನ್, ಮುಖಂಡರಾದ ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ನಾಗೇಶ್, ನೌಷಾದ್, ಸತೀಶ್, ಮಂಜು, ಮಲ್ಲಿಕಾರ್ಜುನ್, ಪ್ರಣಯ್, ನಂದೀಶ್, ಬಸವಣ್ಣ, ಮಹಿಳಾ ಮೋರ್ಚಾದ ಮುಖಂಡೆ ಮಂಗಳಾ, ಅಂಬಿಕಾ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.