ಮಡಿಕೇರಿ: ಕನಿಷ್ಠ ವೆೇತನದ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತೀಯ ಅಂಚೆ ಇಲಾಖಾ ನೌಕರರ ಸಂಘ ಮತ್ತು ನ್ಯಾಷನಲ್ ಯೂನಿಯನ್ ಫಾರ್ ಪೋಸ್ಟಲ್ ಅಂಪ್ಲಾಯಿಸ್ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಇದರಿಂದ ಜಿಲ್ಲೆಯ ಬಹುತೇಕ ಅಂಚೆಕಛೇರಿ ಕಾರ್ಯಸ್ಥಗಿತಗೊಂಡಿತ್ತು.
ಅಖಿಲ ಭಾರತೀಯ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷರಾದ ಜಮುನ, ನ್ಯಾಷನಲ್ ಯೂನಿಯನ್ ಫಾರ್ ಪೋಸ್ಟಲ್ ಅಂಪ್ಲಾಯಿಸ್ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಬಿ. ಗಣೇಶ್ ಅವರ ನೇತೃತ್ವದಲ್ಲಿ ನೂರಾರು ಅಂಚೆ ಇಲಾಖಾ ನೌಕರರು ನಗರದ ಜಿಲ್ಲಾ ಅಂಚೆ ಇಲಾಖಾ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಬಟನೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ 24 ಅಂಚೆ ಇಲಾಖೆೆಗಳಲ್ಲಿನ ಕಾರ್ಯಚಟುವಟಿಕೆ ಸ್ಥಗಿತಗೊಂಡಿತ್ತು.
ಪ್ರತಿಭಟನೆಯ ಮೂಲಕ ಪ್ರಮುಖವಾಗಿ ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು 7ನೇ ವೇತನ ಆಯೋಗದ ವರದಿಯಲ್ಲಿನ ನ್ಯೂನ್ಯತೆಗಳ ಪುನರ್ ಪರಿಶೀಲನೆಗಾಗಿ ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಬೇಡಿಕೆಗಳನ್ನು ಇತ್ಯರ್ಥಗೊಳಿಸಬೇಕೆಂದು, ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಗೆ ಕೇಂದ್ರದ ಮಂತ್ರಿಗಳು ನೀಡಿದ ಆಶ್ವಾಸನೆಗಳನ್ನು ಅದರಲ್ಲೂ ಕನಿಷ್ಠ ವೇತನದಲ್ಲಿ ಹೆಚ್ಚಳ ಹಾಗೂ ಫಿಟ್ಮೆಂಟ್ ಸೂತ್ರಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಮನೆಬಾಡಿಗೆ ಭತ್ಯೆಯನ್ನು ಹಾಲಿ ಇರುವಂತೆ ಉಳಿಸಿಕೊಂಡು ಸಂಚಾರ ಭತ್ಯೆಯನ್ನು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಯಂತೆ ಹೆಚ್ಚಿಸುವುದು ಹಾಗೂ 7ನೇ ವೇತನ ಆಯೋಗದ ಶಿಫಾರಸ್ಸಿನಿಂದ ಉಂಟಾಗಿರುವ ಎಲ್ಲಾ ರೀತಿಯ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಬಗೆಹರಿಸಬೇಕು, ಪಿಎಫ್ಆರ್ಡಿಎ ಕಾಯ್ದೆ ಮತ್ತು ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಕೇಂದ್ರ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡಬೇಕು, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲಾ ಭತ್ಯೆಗಳನ್ನು ನೀಡುವುದು, ದಿನಗೂಲಿ, ಗುತ್ತಿಗೆ, ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ವಿ.ಜಿ. ರಘುನಾಥ್, ಸಹ ಕಾರ್ಯದರ್ಶಿ ಟಿ.ಪಿ. ಶ್ರೀನಿವಾಸ್, ವಲಯ ಪ್ರತಿನಿಧಿ ಎಂ.ಕೆ. ಮೋಹನ್, ಬೇಬಿ ಜೋಸೆಫ್, ನಾಣಯ್ಯ, ಕರ್ನಾಟಕ ವಲಯ ಮಹಿಳಾ ಘಟಕದ ಪ್ರತಿನಿಧಿಗಳಾದ ಪ್ರತಿಭಾ, ರಾಧಾಮಣಿ, ನ್ಯಾಷನಲ್ ಯೂನಿಯನ್ ಫಾರ್ ಪೋಸ್ಟಲ್ ಅಂಪ್ಲಾಯಿಸ್ ನ ಕಾರ್ಯದರ್ಶಿ ಎಂ.ಎಸ್. ಮಂಜುನಾಥ್, ಗ್ರಾಮೀಣ ಅಂಚೆ ಸೇವಕರ ಘಟಕದ ವಸಂತ್ ಸೇರಿದಂತೆ ಅಂಚೆ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.