ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ದಿವಂಗತ ಮಹದೇವಪ್ರಸಾದ್ ಅವರ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವ ಪ್ರಸಾದ್ ರವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ತೆರಕಣಾಂಬಿ ಜಿ.ಪಂ.ವ್ಯಾಪ್ತಿಯ ಒಡಯನಪುರ, ಅಂಕಳ್ಳಿ, ಬಾಚಳ್ಳಿ, ಶೆಟ್ಟಳ್ಳಿ, ಕೆಬ್ಬೆಪುರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮತಯಾಚನೆಗೆ ತೆರಳುವ ಗ್ರಾಮದಲ್ಲಿ ಗ್ರಾಮಸ್ಥರು ವಾದ್ಯದೊಂದಿಗೆ ಸ್ವಾಗತಿಸಿದರೆ, ಮಹಿಳೆಯರು ಹಾರ ಹಾಕಿ ಆರತಿ ಎತ್ತಿ ಸ್ವಾಗತ ಕೋರುತ್ತಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಗೀತಾ ಮಹದೇವಪ್ರಸಾದ್ ಮಾತನಾಡುತ್ತಾ, 1994 ರಿಂದ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸುತ್ತಿದ್ದ ಪತಿ ಮಹದೇವಪ್ರಸಾದ್ ಅವರು ಮಳೆಯಾಶ್ರಿತ ಪ್ರದೇಶವಾದ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅವಿರತವಾಗಿ ಸದಾ ಎಲ್ಲ ವರ್ಗದ ಪರವಾಗಿ ದುಡಿಯುತ್ತಾ ಅಭಿವೃದ್ದಿ ಮೂಲ ಮಂತ್ರವಾಗಿಸಿಕೊಂಡಿದ್ದ ಅವರ ಅಭಿವೃದ್ದಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
ಪ್ರತೀ ಹಳ್ಳಿಯಲ್ಲೂ ಡಾಂಬರು ರಸ್ತೆ, ಉತ್ತಮ ಚರಂಡಿ ವ್ಯವಸ್ಥೆ, ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು, ಆಸ್ಪತ್ರೆಗಳು, ಸಮುದಾಯಭವನಗಳು ನಿರ್ಮಾಣಗೊಂಡಿವೆ. ಒಟ್ಟಾರೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಕ್ಷೇತ್ರವನ್ನು ಮಾಡಲು ಅಭಿವೃದ್ದಿ ಪಡಿಸಲಾಗಿದೆ ಆದ್ದರಿಂದ ನನ್ನ ಗೆಲುವಿಗೆ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.