ಚಿಕ್ಕಮಗಳೂರು: ಅದು ಮಲೆನಾಡನ್ನು ಬೆಚ್ಚಿ ಬೀಳಿಸಿದ ಪುಂಡಾನೆ. ಆ ಪುಂಡಾನೆಯ ದಾಳಿಗೆ ಅದೆಷ್ಟೋ ರೈತರ ಬೆಳೆ ನಾಶವಾಗಿತ್ತು. ಇಂತಹ ಪುಂಡಾನೆಯನ್ನು ಹಿಡಿಯುವಲ್ಲಿ ಶತಾಯುಗತಾಯ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ಭಾಗದ ರೈತರಿಗೆ ಹಾಗೂ ಸ್ಥಳೀಯರಿಗೆ ಒಂದು ಪುಂಡಾನೆ ತಲೆನೋವಾಗಿತ್ತು. ರೈತರ ನೂರಾರು ಎಕರೆ ಬೆಳೆಯನ್ನು ತಿಂದೂ ಸಂಪೂರ್ಣವಾಗಿ ನಾಶ ಮಾಡಿತ್ತು. ಇದರಿಂದ ನೂರಾರು ರೈತರ ಕೋಟ್ಯಾಂತರ ಮೌಲ್ಯ ಬೆಲೆ ಆನೆ ಸರ್ವ ನಾಶ ಮಾಡಿ ರೈತರ ನಿದ್ದೆಗೆಡಿಸಿತ್ತು. ರೈತರು ಹಲವಾರು ಬಾರೀ ಅರಣ್ಯ ಇಲಾಖೆಗೆ ಆನೆಯನ್ನು ಹಿಡಿಯಲು ಮನವಿ ಮಾಡಿದ್ದರು.ಸತತ ಮೂರು ವರ್ಷಗಳ ನಂತರ ಎಚ್ಚರಗೊಂಡ ಅರಣ್ಯ ಇಲಾಖೆ ಅಂತೂ ಇಂತೂ ತಲೆನೋವಾಗಿದ್ದ ಪುಂಡಾನೆಯನ್ನು ಹಿಡಿಯಲು ಸಿದ್ದರಾಗಿ ಇಂದೂ ಕಾರ್ಯಚರಣೆ ಪ್ರಾರಂಭಿಸಿದರು. ಕಾರ್ಯಚರಣೆ ಮಾಡಿದ ಹಿನ್ನಲೆ ಆ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಿಡಿದು ಯಶಸ್ವಿಯಾಗಿದ್ದಾರೆ.
ಕಳೆದ ರಾತ್ರಿ ಸಕ್ರೆಬೈಲು ಮತ್ತು ದುಬಾರೆಯಿಂದ ಆನೆಗಳ ತಂಡ ಬಂದಿತ್ತು. ಇಂದು ಬೆಳಿಗ್ಗೆ ಶಿಶಿಲಾ_ ಭೈರಾಪುರ ಬಳಿಯ ಹೆರಿಗೆ ಅರಣ್ಯ ವ್ಯಾಪ್ತಿಯಲ್ಲಿ ಅಭಿಮನ್ಯು ಸೇರಿದಂತೆ 4 ಆನೆಗಳ ಜೊತೆ 60 ಜನ ಅರಣ್ಯ ಇಲಾಖೆ ಸಿಬ್ಬಂದಿಗಳು ಪುಂಡಾನೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು. ನಂತರ ಸಂಜೆಯ ವೇಳೆಗೆ ಈ ಪುಂಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಇದ್ರಿಂದ ಸ್ಥಳೀಯರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿಯೂ ಸಾಕಷ್ಟು ಸಂತಸಗೊಂಡರು. ಇನ್ನು ಈ ಪುಂಡಾನೆ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ರೈತರ ಜಮೀನಿನ ಮೇಲೆ ದಾಳಿ ನಡೆಸಿ ನೂರಾರು ಏಕರೆ ಬೆಳೆ ನಾಶ ಮಾಡಿತ್ತು. ಈ ಸಂಬಂಧ ಸ್ಥಳೀಯರು ಹಲವು ಬಾರಿ ಆನೆ ಸೆರೆ ಹಿಡಿಯುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿದ ನಾಗರಹೊಳೆ ಯಿಂದ ಬಂದ ಉಮಾಶಂಕರ ನೇತೃತ್ವದ ತಂಡದ ಜೊತೆಗೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದು, ಕೆಲಕಾಲ ಆನೆ ಹಿಡಿಯುವ ಸಾಕಷ್ಟು ಕಸರತ್ತು ನಡೆಸಿದ ಬಳಿಕ ಕೊನೆಗೂ ಅರ್ಜುನ ಹಾಗೂ ಅಭಿಮನ್ಯುವಿನ ಸತತ ಪ್ರಯತ್ನದಿಂದ ಆನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಈ ಪುಂಡಾನೆ ಪ್ರಾರಂಭದಲ್ಲಿ ಸಾಕಷ್ಟು ಆರ್ಭಟಿಸಿದರೂ ಕೂಡ ಅರ್ಜುನ ಹಾಗೂ ಅಭಿಮನ್ಯು ಮುಂದೆ ಯಾವುದೇ ಪ್ರಯೋಜನ ಆಗಲಿಲ್ಲ.ಈ ಎರಡೂ ಆನೆಗಳು ನೀಡಿದ ಪಂಚ್ ಗೆ ಕಕ್ಕಾಬಿಕ್ಕಿಯಾಗಿ ಸಾಕಾನೆ ಹೇಳಿದ ರೀತಿಯಲ್ಲಿ ಪುಂಡಾನೆ ಕೇಳಲೂ ಆರಂಭಿಸಿತು. ನಂತರ ಅರವಳಿಕೆ ಮದ್ದು ನೀಡಿ ಆನೆಯನ್ನು ಹಗ್ಗದಲ್ಲಿ ಬಿಗಿದು ಸೆರೆ ಹಿಡಿಯಲಾಯಿತು. ಸೆರೆಹಿಡಿದ ಆನೆಯನ್ನು ಲಾರಿಯಲ್ಲಿ ತುಂಬಿ ದುಬಾರೆ ಅಥವಾ ನಾಗರಹೊಳೆ ಆನೆ ಬಿಡಾರಕ್ಕೆ ರವಾನೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದರು.
ಒಟ್ಟಾರೆಯಾಗಿ ಪುಂಡಾನೆಯ ಕಾಟದಿಂದ ಬೇಸತ್ತ ಜನತೆ ಆನೆ ಸೆರೆಯಾದ್ರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಆನೆ ಸೆರೆ ಕಾರ್ಯಚರಣೆಯನ್ನು ಸಾವಿರಾರೂ ಜನರು ಪ್ರತ್ಯಕ್ಷವಾಗಿ ಕಂಡರು. ಇತ್ತ ಒಂದೇ ದಿನಕ್ಕೆ ಆನೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದರು.