ಚಿಕ್ಕಮಗಳೂರು:ರಾಜ್ಯದಲ್ಲಿ ತೀವ್ರ ತೆರನಾದ ಭೀಕರ ಬರಗಾಲ ಬಂದಿರುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲಾಗದೆ ಕಳೆದೊಂದು ವರ್ಷದಿಂದ ಪ್ರತಿನಿತ್ಯ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಸಾಲ ಮನ್ನಾಗೊಳಿಸದೆ ರೈತ ಸಮೂಹಕ್ಕೆ ಅನ್ಯಾಯವೆಸಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ರೈತರು ರಾಜ್ಯ ಸರಕಾರ ಸಾಲ ಮನ್ನಾ ಮಡಬಹುದು ಎಂದು ಕಾತುರದಿಂದ ನೋಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹಾಗೆಯೇ ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಕಿಂಚಿತ್ತಾದ ವಿಶ್ವಾಸವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೊದಿಯವರು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಒಂದು ಸಾಂತ್ವಾನದ ನುಡಿಯನ್ನು ಎಲ್ಲೂ ಹೇಳಿಕೊಂಡಿಲ್ಲ. ಅವರು ಕೇವಲ ಚುನಾವಣಾ ಗಿಮಿಕ್ ಮತ್ತಿತರೆ ಪ್ರಚಾರಗಳಿಗೆಗಾಗಿ ಅವಕಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ಮೋದಿಯವರು ವಿದೇಶ ಯಾತ್ರೆಗೆ ಪ್ರತಿ ಸಲ ತೆರಳುತ್ತಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಒಬ್ಬ ರೈತರ ಮನೆಗೆ ಭೇಟಿ ನೀಡದಿರುವುದು ನೋಡಿದರೆ ಇವರಿಗೆ ಹಾಗೂ ರಾಜ್ಯದ ಬಿಜೆಪಿ ನಾಯಕರಿಗೆ ರೈತರ ಮೇಲೆ ಯಾವ ರೀತಿಯ ಕಾಳಜಿ ಇದೆ ಎನ್ನುವುದು ತಿಳಿಯುತ್ತದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೊಸಳೆ ಕಣ್ಣೀರು ಸುರಿಸಿ ಮತ ಗಿಟ್ಟಿಸಿಕೊಳ್ಳುವ ಷಡ್ಯಂತ್ರ ಹೆಣೆಯುತ್ತಾರೆ. ರಾಜ್ಯದ 18 ಮಂದಿ ಬಿಜೆಪಿ ಸಂಸದರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾಗೊಳಿಸಲಿ ಎಂದು ಸವಾಲು ಹಾಕಿದರು.