ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಗೌತಳ್ಳಿ ಸಮೀಪದ ಬೇವಿನಗುಡ್ಡೆ ಪ್ರದೇಶದಲ್ಲಿ ಅಕ್ರಮವಾಗಿ ಹುರುಳುಹಾಕಿ ಜಿಂಕೆಯನ್ನು ಬೇಟೆಯಾಡಿದ ಇಬ್ಬರನ್ನು ಬಂಧಿಸುವಲ್ಲಿ ಮೂಡಿಗೆರೆ ವಲಯಾರಣ್ಯಾಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಶಿಖಾರಿ ಮಾಡಿ ಮಾಂಸ ಹಂಚಿಕೊಳ್ಳುವ ವೇಳೆ ಖಚಿತ ಮಾಹಿತಿ ಬಂದ ಮೇರೆಗೆ ಬೇವಿನಗುಡ್ಡೆ ಸಮೀಪದ ಸಿ.ಎನ್.ರಾಜು ಎಂಬುವರ ಖಾಸಗಿ ಹಿಡುವಳಿ ಜಮೀನಿನಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹುರುಳು ಹಾಕಿ ಬೇಟೆಯಾಡಿದ ಸಿ.ಎನ್. ರಾಜು ಮತ್ತು ಸೋಮಶೇಖರ್ ಎಂಬುವವರನ್ನು ಬಂಧಿಸಿದ್ದಾರೆ. ಶಿಖಾರಿಯಲ್ಲಿ ಭಾಗವಹಿಸಿದ್ದ ಮತೋಬ್ಬ ರಾಜು ಅಲಿಯಾಸ್ ಗಡ್ಡರಾಜು ತಲೆ ತಪ್ಪಿಸಿಕೊಂಡಿದ್ದು ಇವನ ಪತ್ತೆಗಾಗಿ ಬಲೆಬೀಸಲಾಗಿದೆ. ಬೇಟೆಗೆ ಸಂಬಂಧ ಜಿಂಕೆ ತಲೆ, 15 ಕೆ.ಜಿ. ಜಿಂಕೆ ಮಾಂಸ, ಬೇಟೆಗೆ ಬಳಸಿದ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರನ್ನು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿದ್ದಾರೆ.