ಚಿಕ್ಕಮಗಳೂರು: ತಮ್ಮ ಜನಾಂಗವನ್ನು ಮೀಸಲಾತಿ ಪಟ್ಟಿ ಪ್ರವರ್ಗ-1 ರ ಪರಿಶಿಷ್ಠ ಪಂಗಡಕ್ಕೆ ಮತ್ತು ಅಲೆಮಾರಿ ಗುಂಪಿಗೆ ಸೇರ್ಪಡೆಗೊಳಿಸುವಂತೆ ತರೀಕೆರೆ ತಾಲ್ಲೂಕಿನ ಧನಿಗರ ಗೌಳಿ ಸಮುದಾಯದ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಭೇಟಿ ಮಾಡಿದ ಸಮುದಾಯದ ಮುಖಂಡರು ಈ ಸಂಬಂಧ ಮನವಿ ಸಲ್ಲಿಸಿದರು. ಧನಿಗರ ಗೌಳಿ ಸಮುದಾಯದವರು ತರೀಕೆರೆ ತಾಲ್ಲೂಕು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ತಲತಲಾಂತರದಿಂದ ವಾಸವಿದ್ದು, ಏಳು ಲಕ್ಷ ಜನಸಂಖ್ಯೆ ಹೊಂದಿರುವ ನಾವುಗಳು ಮೂಲತಃ ಅಲೆಮಾರಿ ಜನಾಂಗವಾಗಿದ್ದು, ಕಾಲಾನುಕ್ರಮದಲ್ಲಿ ಜೀವನೋಪಾಯಕ್ಕಾಗಿ ಪಶುಪಾಲನೆಯಲ್ಲಿ ತೊಡಗಿದ್ದೇವೆ ಎಂದರು.
ರಾಜ್ಯದ ಜಾತಿ ಪಟ್ಟಿಯಲ್ಲಿ ತಮ್ಮ ಜನಾಂಗವನ್ನು ಉಪಹೆಸರುಗಳು ಮತ್ತು ವಿವಿಧ ಕೆಟಗರಿಗಳಲ್ಲಿ ದಾಖಲಿಸಿ ಗೊಂದಲ ಉಂಟು ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದ ಅವರು ಇದರಿಂದಾಗಿ ತಮ್ಮ ಜನಾಂಗಕ್ಕೆ ಸರ್ಕಾರದ ಸವಲತ್ತುಗಳು, ಮೀಸಲಾತಿ ಹಾಗೂ ಜಾತಿ ಪ್ರಮಾಣಪತ್ರ ದೊರೆಯುತ್ತಿಲ್ಲ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ತಮ್ಮ ಜನಾಂಗದ ಹೆಸರನ್ನು ಜಾತಿಪಟ್ಟಿಯಲ್ಲಿ ಧನಿಗರ ಗೌಳಿ ಸಮುದಾಯ ಎಂದು ಸೇರಿಸಬೇಕು, ಪರಿಶಿಷ್ಠ ಪಂಗಡಕ್ಕೆ ತಮ್ಮ ಸಮುದಾಯವನ್ನು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.