ಮಡಿಕೇರಿ: ಸೂಕ್ಷ್ಮ ಪರಿಸರವಲಯದ ನೆಪವೊಡ್ಡುವ ಮೂಲಕ ಗುರುತಿಸಲ್ಪಟ್ಟ ಜಾಗದಲ್ಲಿ ಕಸ ವಿಲೇವಾರಿ ಮಾಡದಂತೆ ಭಾಗಮಂಡಲ ಗ್ರಾಮ ಪಂಚಾಯ್ತಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿರುವ ವಿಚಾರ ಮಡಿಕೆೇರಿ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ನಗರದ ಎಸ್ಜಿಎಸ್ವೈ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾಗಮಂಡಲ ಗ್ರಾಮ ಪಂಚಾಯ್ತಿ ಕಸ ವಿಲೇವಾರಿಗಾಗಿ ಪೈಸಾರಿ ಜಾಗವನ್ನು ಗುರುತಿಸಿ, ಅದನ್ನು ತ್ಯಾಜ್ಯ ವಿಲೇಗೆ ಸಜ್ಜುಗೊಳಿಸುವ ಹಂತದಲ್ಲಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿರುವ ವಿಚಾರ ಪ್ರಸ್ತಾಪವಾಯಿತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಸಂದರ್ಭ ವನ್ಯಜೀವಿ ವಿಭಾಗದ ಆರ್ಎಫ್ಒ ಅನುಪಸ್ಥಿತಿಯಲ್ಲಿ ಉಪಸ್ಥಿತರಿದ್ದ ರೇಂಜ್ ಆಫೀಸರ್ ಮಾತನಾಡಿ, ಭಾಗಮಂಡಲ ಪಂಚಾಯ್ತಿ ಗುರುತಿಸಿರುವ ಪೈಸಾರಿ ಜಾಗವು ವನ್ಯ ಜೀವಿವಲಯ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ವಲಯದ ಸಮೀಪ ಬರುತ್ತಿರುವುದಾಗಿ ತಿಳಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಶಾಸಕರು, ‘ಸೂಕ್ಷ್ಮ ಪರಿಸರ ವಲಯವನ್ನು ಡಿಕ್ಲೇರ್ ಮಾಡಲಾಗಿದೆಯೇ’ ಎಂದು ಪ್ರಶ್ನಿಸಿದರು. ಸೂಕ್ಷ್ಮ ಪರಿಸರ ವಲಯ ಘೋಷಣೆಗೂ ಮೊದಲೇ ನೋಟೀಸ್ ಜಾರಿ ಮಾಡಿದ್ದೀರ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಧಾರ್ಮಿಕ ಕ್ಷೇತ್ರವಾದ ಭಾಗಮಂಡಲಕ್ಕೆ ಭಕ್ತಾದಿಗಳು, ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕಸದ ಸಂಗ್ರಹ ಪ್ರಮಾಣವು ಹೆಚ್ಚಾಗಿರುತ್ತದೆ. ಇಂತಹ ಸಂದರ್ಭ ಕಸ ವಿಲೇವಾರಿಗೆ ಪಂಚಾಯ್ತಿ ಕ್ರಮ ಕೈಗೊಳ್ಳಲು ಮುಂದಾದಾಗ ಅರಣ್ಯ ಇಲಾಖೆ ನೋಟಿಸ್ ನೀಡುವುದು, ಅಡ್ಡಿಪಡಿಸುವುದು ಸರಿಯಲ್ಲವೆಂದರು. ಭಾಗಮಂಡಲದಲ್ಲಿರುವ ಆರ್ಎಫ್ಒ ವಸತಿ ಗೃಹಗಳ ಮುಂದೆ ಪಂಚಾಯ್ತಿಯ ಕಸ ಸುರಿಯಿರಿ ಎಂದು ಶಾಸಕ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಾಳೆಯಿಂದಲೇ ಗುರುತಿಸಲ್ಪಟ್ಟ ಜಾಗದಲ್ಲಿ ಕಸ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಮಡಿಕೇರಿ ತಾಪಂ ಅಧ್ಯಕ್ಷರಾದ ತೆಕ್ಕಡೆ ಶೊಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸುಬ್ರಮಣಿ, ತಹಸೀಲ್ದಾರ್ ಕುಸುಮಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಯ್ ತಮ್ಮಯ್ಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು.