ಎಚ್.ಡಿ.ಕೋಟೆ: ರೋಗಿಗಳ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಸರ್ಕಾರದಿಂದ ನೀಡಲಾಗಿದ್ದ ಔಷಧಿ ವೈದ್ಯರಿಲ್ಲದೆ ಬಳಕೆಗೆ ಬಾರದೆ ಉಳಿದಿದ್ದರಿಂದ ಅದನ್ನು ಮರಳಿ ಪಡೆದ ಘಟನೆ ತಾಲೂಕಿನ ಗಡಿ ಭಾಗದ ಗ್ರಾಮವಾಗಿರುವ ಡಿ.ಬಿ.ಕುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಆರೋಗ್ಯ ಕೇಂದ್ರದ ಮೂಲಕ ಆದಿವಾಸಿಗಳು ಮತ್ತು ಕಡು ಬಡವರು ವಾಸಿಸುವ ಈ ಗ್ರಾಮಗಳ ಜನರಿಗೆ ಸರ್ಕಾರ ಲಕ್ಷಾಂತರ ಬೆಲೆ ಬಾಳುವ ಔಷಧಿಗಳು ಮತ್ತು ಇತರೆ ಚಿಕಿತ್ಸಾ ಪದಾರ್ಥಗಳನ್ನು ನೀಡಲಾಗಿತ್ತು, ಆದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬಾರದೆ ಇರುವುದರಿಂದ ಇಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆಯೂ ಸಿಗಲಿಲ್ಲ, ಜೊತೆಗೆ ಔಷಧಿಗಳು ಬಳಕೆಯಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿಗೆ ಸರಬರಾಜು ಆಗಿದ್ದ ಔಷಧಿಗಳು ಮತ್ತು ಇತರೆ ಪದಾರ್ಥಗಳು ನಿಗದಿತ ಅವಧಿ ಪೂರ್ಣಗೊಂಡು ಹಾಳಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬೇರೊಂದು ಆರೋಗ್ಯ ಕೇಂದ್ರದಲ್ಲಿ ಬಳಸಿಕೊಳ್ಳಲು ಅಧಿಕಾರಿಗಳು ಇಲ್ಲಿನ ಕೇಂದ್ರದಿಂದ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿ ಅವರು ಮಾತನಾಡಿ ಡಿ.ಬಿ.ಕುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಳಿಸಿದ ವೈದ್ಯರು ಇಲ್ಲಿ ಕರ್ತವ್ಯ ಸಲ್ಲಿಸಲು ನಿರಾಕರಿಸಿದ್ದರಿಂದ ಇಲ್ಲಿಗೆ ಸರಬರಾಜು ಮಾಡಲಾಗಿದ್ದ ಔಷಧಿಗಳು ಬಳಕೆಯಾಗದೆ ಉಳಿದುಕೊಂಡಿವೆ. ಅವುಗಳನ್ನು ವಾಪಸ್ ಪಡೆದು ಇತರೆ ಆರೋಗ್ಯ ಕೇಂದ್ರದಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.