ಚಾಮರಾಜನಗರ: ಸ್ವಚ್ಛತೆ ಬಗ್ಗೆ ದೇಶದಾದ್ಯಂತ ಅಭಿಯಾನ ನಡೆಸಿದರೂ ಕೆಲವೆಡೆ ಅದರ ಬಗ್ಗೆ ಕಿಂಚಿತ್ತೂ ಗಮನಹರಿಸದಿರುವುದರಿಂದ ಸ್ವಚ್ಛತೆ ಮಾಯವಾಗಿ ಅಶುಚಿತ್ವದ ವಾತಾವರಣ ನಿರ್ಮಾಣವಾಗಿ ರೋಗ ರುಜಿನಗಳಿಗೆ ಎಡೆಮಾಡಿ ಕೊಡುವ ವಾತಾವರಣ ನಿರ್ಮಾಣವಾಗುತ್ತಿದೆ.
ಇದಕ್ಕೆ ಗುಂಡ್ಲುಪೇಟೆ ಪಟ್ಟಣದ ಪ್ರಾಥಮಿಕ ಶಾಲೆಯ ಆವರಣ ಸಾಕ್ಷಿಯಾಗಿದೆ. ಶಾಲಾ ಆವರಣ ಎಂದರೆ ಶುಚಿಯಾಗಿರ ಬೇಕು. ಆದರೆ ಇಲ್ಲಿ ಶಾಲಾ ಆವರಣವೇ ಗಬ್ಬೆದ್ದು ನಾರುತ್ತಿದ್ದು, ಈ ವಾತಾವರಣದಲಿಯೇ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಇಷ್ಟಕ್ಕೂ ಇಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೇನು ಎಂಬುದನ್ನು ನೋಡುವುದಾದರೆ, ಶಾಲೆಯ ಪಕ್ಕದಲ್ಲೇ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಾಮಗಾರಿ ನಡೆಸುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಲುಷಿತ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ವಿಳಂಬಗತಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆಂದು ನೀರಿನ ತೊಟ್ಟಿ ನಿರ್ಮಿಸಿದ್ದು, ಈ ನೀರು ತುಂಬಿದ ತೊಟ್ಟಿಯಲ್ಲಿ ಕಸಕಡ್ಡಿಗಳು, ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯಗಳು ಸಂಗ್ರಹವಾಗಿದ್ದು, ಇದರಿಂದ ವಾತಾವರಣ ಕಲುಷಿತಗೊಂಡಿದೆ. ಇದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ತೊಟ್ಟಿಯಿಂದ ನೀರು ಚೆಲ್ಲಿ ಹೊರಹೋಗುತ್ತಾ ಅಲ್ಲೇ ನಿಂತುಕೊಂಡು ಅದರಲ್ಲಿ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ಜತೆಗೆ ಕೆಸರುಮಯವಾಗಿದ್ದು, ಶಾಲಾ ವಿದ್ಯಾರ್ಥಿಗಳು ಇದನ್ನೇ ತುಳಿದುಕೊಂಡು ಹೋಗಬೇಕಾಗಿದೆ. ತೊಟ್ಟಿಯಿಂದ ಹೆಚ್ಚಿನ ನೀರು ಹೊರಕ್ಕೆ ಹರಿದು ಆವರಣದ ತುಂಬೆಲ್ಲಾ ಕೊಚ್ಚೆಯಾಗಿದ್ದು, ಅನೈರ್ಮಲ್ಯದ ವಾತಾವರಣವುಂಟಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಕೆಸರಿನಲ್ಲಿಯೇ ಶಾಲೆಗೆ ಬರಬೇಕಾಗಿದ್ದು ಶಾಲಾವರಣದಲ್ಲಿ ಆಟೋಟ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ. ಸೊಳ್ಳೆಗಳಿಂದ ಕಚ್ಚಿಸಿಕೊಂಡು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.