ಗುಂಡ್ಲುಪೇಟೆ: ಸರ್ಕಾರಿ ಶಾಲೆಯ ಸುತ್ತ ನಿರ್ಮಿಸಿದ್ದ ಕಾಂಪೌಂಡ್ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹುಂಡೀಪುರ ಗ್ರಾಮದಲ್ಲಿ ನಡೆದಿದ್ದು, ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಶಾಲೆಗೆ ರಕ್ಷಣೆ ಒದಗಿಸುವ ಮತ್ತು ಜನಜಾನುವಾರುಗಳು ಶಾಲೆಯೊಳಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ಹಂಡೀಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಸುತ್ತ ಇಟ್ಟಿಗೆಯಿಂದ ಕಾಂಪೌಂಡ್ ಅನ್ನು ಕಳೆದ ಐದು ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಕಾಮಗಾರಿಯನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಿದ್ದರಿಂದ ಕಾಂಪೌಂಡ್ ನಲ್ಲಿ ಬಿರುಕು ಕಾಣಿಸಿಕೊಂಡು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 36 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸದಾ ಮಕ್ಕಳು ಓಡಾಡುತ್ತಿರುವುದರಿಂದ ಬಿರುಕುಬಿಟ್ಟ ಕಾಂಪೌಂಡ್ ಕುಸಿದು ಬಿದ್ದರೆ ಅನಾಹುತ ಸಂಭವಿಸುತ್ತದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಕಾಂಪೌಂಡ್ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಈ ಸಂದರ್ಭ ಮಕ್ಕಳು ಶಾಲೆಯಲ್ಲಿ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕ ನಾಗಮಲ್ಲೇಗೌಡ ಅವರು ಶಾಲಾ ಕಾಂಪೌಂಡ್ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಲಾ ಸಮಯದಲ್ಲಿ ಘಟನೆ ನಡೆದಿದ್ದರೆ ಅನಾಹುತವಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಗ್ರಾಮಸ್ಥರಾದ ಮಂಜು, ಸತೀಶ್ ಅವರು ಮಾತನಾಡಿ ಕಳಪೆ ಕಾಮಗಾರಿ ಹಾಗೂ ನಿಯಮಾನುಸಾರ ಗುಣಮಟ್ಟದ ಪದಾರ್ಥಗಳ ಬಳಕೆ ಮಾಡದ ಪರಿಣಾಮವಾಗಿ ನಿರ್ಮಿಸಿದ ಶಾಲಾ ಕಾಂಪೌಂಡ್ ಕುಸಿದು ಬಿದ್ದಿದೆ. ಇನ್ನಾದರೂ ಸಂಬಂಧಪಟ್ಟವರು ಶಾಲಾ ಕಾಂಪೌಂಡ್ ನಿರ್ಮಾಣ ಮಾಡುವಾಗ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗಿದೆ