ಹಾಸನ: ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚಿದ ಶಾಲಾ ಕಟ್ಟಡ ಪುಂಡಪೋಕರಿಗಳ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಟ್ಟಿರುವುದು ಅರಕಲಗೋಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಹೊಂಡರವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅರಕಲಗೋಡು ತಾಲೂಕಿನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ ಈಗಾಗಲೇ ಸುಮಾರು ಹದಿನೈದು ಶಾಲೆಗಳನ್ನು ಮುಚ್ಚಲಾಗಿದೆ ಎನ್ನಲಾಗಿದ್ದು, ಅದರಲ್ಲಿ ಹೊಂಡರವಳ್ಳಿ ಶಾಲೆಯೂ ಒಂದಾಗಿದೆ. ಗ್ರಾಮದ ಮಕ್ಕಳಿಗೆ ಅನುಕೂಲವಾಗುವಂತೆ ಹಲವು ವರ್ಷಗಳ ಹಿಂದೆ ಹೊಂಡರವಳ್ಳಿಯಲ್ಲಿ ಶಾಲೆ ತೆರೆಯಲಾಗಿತ್ತು. ಆಗ ಖಾಸಗಿ ಶಾಲೆಗಳ ಹಾವಳಿಯಿಲ್ಲದ ಕಾರಣದಿಂದ ಇಲ್ಲಿಗೆ ಗ್ರಾಮದ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಬರುತ್ತಿದ್ದರು. ಹೀಗಾಗಿ ಶಾಲೆ ಚೆನ್ನಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದರಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಗೆ ಶಾಶ್ವತ ಬೀಗ ಹಾಕಲಾಯಿತು.
ಶಾಲೆಗೆ ಬೀಗ ಹಾಕಿದ್ದರೂ ಇಲ್ಲಿರುವ ಹಿಂದೆ ಅಭ್ಯಾಸ ಮಾಡಿದ ಮಕ್ಕಳ ದಾಖಲಾತಿ, ಇನ್ನಿತರೆ ದಾಖಲೆಗಳು, ಪೀಠೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಿಲ್ಲ. ಅಲ್ಲದೆ ಕಟ್ಟಡವನ್ನು ಬೇರೆ ಯಾವುದಾದರು ಸರ್ಕಾರಿ ಕಚೇರಿಗೂ ಬಳಕೆ ಮಾಡಿಲ್ಲ. ಹೀಗಾಗಿ ಅದು ಅನಾಥವಾಗಿದ್ದು ಪುಂಡಪೋಕರಿಗಳಿಗೆ ಅಕ್ರಮ ಚಟುವಟಿಕೆಗಳಿಗೆ ಅಡ್ಡೆಯಾಗಿದೆ. ಈ ನಡುವೆ ಬೀಗ ಒಡೆದು ಶಾಲಾ ಕೊಠಡಿಯೊಳಗೆ ನುಗ್ಗಿದ ಕೆಲವು ಕಿಡಿಗೇಡಿಗಳು ಇಲ್ಲಿದ್ದ ದಾಖಲಾತಿಗಳನ್ನು ಚಲ್ಲಾಪಿಲ್ಲಿಯಾಗಿ ಹರಡಿದ್ದಲ್ಲದೆ, ಶಾಲಾ ಗೋಡೆಯ ಮೇಲೆ ಬರೆಸಲಾಗಿದ್ದ ರಾಷ್ಟ್ರ್ಟನಾಯಕರ ಭಾವಚಿತ್ರಗಳನ್ನು ವಿರೂಪಗೊಳಿಸಿ ವಿಕೃತ ಸಂತೋಷಪಟ್ಟಿದ್ದಾರೆ.
ಇದನ್ನು ಗಮನಿಸಿದ ಗ್ರಾಮದ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಇನ್ನು ಶಾಲೆ ಮುಚ್ಚುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳದ ಕಾರಣದಿಂದ ದಾಖಲಾತಿಗಳು ಕಿಡಿಗೇಡಿಗಳ ಕೈಗೆ ಸಿಕ್ಕಿ ನಾಶವಾಗಿದೆ. ಕಟ್ಟಡವೂ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಅವರು ತಾಲೂಕಿನಲ್ಲಿ 15 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಕಾರಣದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅದೇ ರೀತಿ ಹೊಂಡರವಳ್ಳಿ ಶಾಲೆಯನ್ನು ಮುಚ್ಚಿದ್ದೇವೆ. ಮುಂದಿನ ಆದೇಶ ಬರುವ ತನಕ ಶಾಲಾ ದಾಖಲೆ. ಪರಿಕರಗಳನ್ನು ಸಮೀಪದ ಹೊಳಲಗೋಡು ಸರಕಾರಿ ಶಾಲೆಗೆ ಸ್ಧಳಾಂತರಿಸಲು ಕ್ರಮಕೈಗೊಂಡಿದ್ದಾಗಿಯೂ ಅಲ್ಲದೆ ಆಲದಹಳ್ಳಿ ಗ್ರಾಪಂಗೆ ಶಾಲಾ ಕೊಠಡಿಯನ್ನು ಬಳಸಿಕೊಳ್ಳುವ ಸಲುವಾಗಿ ಗ್ರಾ.ಪಂ ಆಡಳಿತದೊಂದಿಗೆ ಮಾತುಕತೆ ನಡೆಸಿದ್ದಾಗಿಯೂ ತಿಳಿಸಿದ್ದಾರೆ. ಇನ್ನು ಮುಂದೆಯಾದರೂ ಶಾಲಾ ಕಟ್ಟಡ ಸದುದ್ದೇಶಕ್ಕೆ ಬಳಕೆಯಾಗಲಿ. ಇಲ್ಲದಿದ್ದರೆ ಕಿಡಿಗೇಡಿಗಳ ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುವುದರಲ್ಲಿ ಸಂಶಯವಿಲ್ಲ.