ಎಚ್.ಡಿ.ಕೋಟೆ: ಹೆಗ್ಗಡಾಪುರ ಮತ್ತು ನಾಗನಹಳ್ಳಿಯ ಬಾಳೆತೋಟದಲ್ಲಿ ಅವಿತಿದ್ದ ಹುಲಿರಾಯ ಕೊನೆಗೂ ಸಿಗದೆ ಕಾರ್ಯಾಚರಣೆಗೆ ಬಂದ ಅರಣ್ಯ ಇಲಾಖೆಯ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಎರಡು ದಿನಗಳಿಂದ ನಡೆದ ಕಾರ್ಯಾಚರಣೆ ವಿಫಲವಾಗಿದ್ದು, ಬಹುಶಃ ಹುಲಿರಾಯ ಊರುಬಿಟ್ಟು ಕಾಡು ಸೇರಿದ್ದಾನೆ ಎಂಬ ತೀರ್ಮಾನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಹಾಗೆ ನೋಡಿದರೆ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಹಲವು ಬಾರಿ ಕಾಣಿಸಿಕೊಂಡಿದ್ದು ಕೆಲವನ್ನು ಸೆರೆಹಿಡಿಯಲಾಗಿದೆ. ಇತ್ತೀಚೆಗಷ್ಟೇ ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಹುಲಿ ಬಳಿಕ ಸಾವನ್ನಪ್ಪಿತ್ತು. ಇದೀಗ ಕಾಣಿಸಿಕೊಂಡಿರುವ ಹುಲಿ ಸುಮಾರು ಒಂದೂವರೆ ವರ್ಷದಾಗಿರಬಹುದೆಂದು ಅಂದಾಜಿಸಲಾಗಿದೆ. ತಾಯಿಯಿಂದ ಬೇರ್ಪಟ್ಟ ಕಾರಣ ಇದಕ್ಕೆ ಸರಿಯಾದ ಬೇಟೆ ಸಿಗದೆ ಆಹಾರವಿಲ್ಲದೆ ನಿತ್ರಾಣಗೊಂಡಿದೆ. ಅರಣ್ಯದಿಂದ ತಪ್ಪಿಸಿಕೊಂಡು ಬಂದಿರುವ ಹುಲಿ ಬಾಳೆತೋಟ ಸೇರಿಕೊಂಡಿತ್ತು. ಬಹುಶಃ ಕಾರ್ಯಾಚರಣೆ ಸಂದರ್ಭ ಅರಣ್ಯಕ್ಕೆ ಮರಳಿರಬಹುದೆಂದು ಹೇಳಲಾಗುತ್ತಿದೆ.
ಸೋಮವಾರ ಬೆಳಗ್ಗೆ 6ರಿಂದಲೇ ಸಾಕಾನೆಗಳಾದ ಅಭಿಮನ್ಯು ಮತ್ತು ಕೃಷ್ಣರನ್ನು ಬಳಸಿಕೊಂಡು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ಸಿಬ್ಬಂದಿಗಳು ಐದಾರು ತಂಡ ಮಾಡಿಕೊಂಡು ಹುಲಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲೂ ಹುಲಿಯ ಸುಳಿವು ಸಿಗಲಿಲ್ಲ. ಜತೆಗೆ ಹುಲಿಯ ಹೆಜ್ಜೆಗುರುತು ಕೂಡ ಕಂಡು ಬಂದಿಲ್ಲ. ಹುಲಿ ಕಾಣಿಸಿಕೊಂಡಿದ್ದ ಸ್ಥಳದಿಂದ ಸುಮಾರು ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸಂಜೆಯಾದರೂ ಹುಲಿಯ ಸುಳಿವೇ ಸಿಕ್ಕಿಲ್ಲ.
ಇನ್ನು ಕಾರ್ಯಾಚರಣೆ ವೇಳೆ ಸಮೀಪದ ದಟ್ಟಹಳ್ಳ ಕಾಡಿಗೆ ಒಂದು ಕಿಲೋಮೀಟರ್ ಅಂತರದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಹುಲಿ ಕಾಡಿಗೆ ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೂ ಕಾರ್ಯಾಚರಣೆ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹುಲಿಯ ಪತ್ತೆಗಾಗಿ ಮತ್ತೆ ಹುಡುಕಾಟ ನಡೆಸುವ ಸಾಧ್ಯತೆಯಿದೆ. ಹುಲಿ ಕಾಣಿಸಿಕೊಳ್ಳದಿರುವುದು ಗ್ರಾಮಸ್ಥರಿಗೆ ಭಯವನ್ನುಂಟು ಮಾಡಿದೆ.