ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯಿಂದ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದರ ಜೊತೆಗೆ ಲಾರಿ ಮಾಲೀಕರು ಸರಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಾಗಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಮರಳು ಗ್ರಾಹಕರಿಂದ ವ್ಯಕ್ತವಾಗಿದೆ.
ಆಶ್ರಯ ಸಹಿತ ವಿವಿಧ ವಸತಿ ಫಲಾನುಭವಿಗಳಿಗೆ, ಇತರೆ ಮನೆ, ವಿವಿಧ ಕಟ್ಟಡ ಕಾಮಗಾರಿಗಳಿಗೆ ಕಳೆದ ತಿಂಗಳಿನಿಂದ ಗ್ರಾಹಕರಿಗೆ ಮರಳು ವಿತರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ತಾಲೂಕಿನ ಹಿರೇಶಿಗರ, ಕಣಚೂರು, ಜಿ.ಅಗ್ರಹಾರ, ಚಕ್ಕುಡಿಗೆಯಲ್ಲಿನ ಸ್ಟಾಕ್ಯಾರ್ಡ್ನಿಂದ ಗ್ರಾಹಕರಿಗೆ ಮರಳು ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಮರಳು ಸಾಗಿಸುವ ಲಾರಿ ಮಾಲೀಕರು ಮನಸ್ಸಿಗೆ ಬಂದಂತೆ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಲಾರಿ ಮಾಲೀಕರ ಸಭೆ ನಡೆಸಿದ್ದರು. ತಾಲೂಕಿನ ಸ್ಟಾಕ್ ಯಾರ್ಡ್ನಲ್ಲಿರುವ ಮರಳು ಸಾಗಿಸಲು ಮೂಡಿಗೆರೆ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಿಗೆ 4.500 ರೂ, ಚಿಕ್ಕಮಗಳೂರು ನಗರಕ್ಕೆ 6500, ತರಿಕೆರೆಗೆ 7500 ರೂ. ನಿಗದಿಪಡಿಸಲಾಗಿದೆ. ಆದರೆ ಜಿಲ್ಲಾಧಿಕಾರಿ ಆದೇಶವನ್ನು ಲಾರಿ ಮಾಲೀಕರು ಮತ್ತು ಚಾಲಕರು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿವೆ.
ಗ್ರಾಹಕರಿಗೆ ಮರಳು ವಿತರಣೆಗೆ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪರವಾನಗಿ ಸಿಕ್ಕ ಬಳಿಕ ಅರ್ಜಿದಾರರಿಗೆ ಮತ್ತು ಲಾರಿ ಮಾಲೀಕರ ಮೊಬೈಲ್ಗಳಿಗೆ ಮೆಸೇಜ್ ಕಳಿಸಲಾಗುತ್ತದೆ. ಇಂತಹ ಮೇಸೇಜ್ ಪಡೆಯುವ ಲಾರಿ ಮಾಲೀಕರು ಗ್ರಾಹಕರನ್ನು ಮೊಬೈಲ್ನಲ್ಲಿ ಸಂಪರ್ಕಿಸಿ ‘ನಿಮಗೆ ಮರಳು ಪರವಾನಗಿ ಸಿಕ್ಕಿದೆ. ನಮ್ಮ ಲಾರಿಯಲ್ಲಿ ಮೂಡಿಗೆರೆ ಪಟ್ಟಣಕ್ಕೆ ಮರಳು ಹಾಕಲು ರೂ.5000 ಸಾವಿರ, ಅನ್ಲೋಡ್ಗೆ ರೂ.750, ಡ್ರೈವರ್ ಬೇಟಾ ರೂ.300 ಕೊಡಬೇಕು. ಲಾರಿಯಲ್ಲಿ ಫುಲ್ ಲೋಡ್ ಮಾಡಿಸಿಕೊಂಡು ಬರಬೇಕೆಂದರೆ ಹೆಚ್ಚುವರಿ ಬಾಡಿಗೆ ರೂ.3000 ಮತ್ತು ಸ್ಟಾಕ್ಯಾರ್ಡ್ನಲ್ಲಿ ಮರಳು ಹಾಕುವವರಿಗೆ ರೂ.3000 ಹೆಚ್ಚುವರಿಯಾಗಿ ಕೊಟ್ಟರೆ ತರುತ್ತೇವೆ ಇಲ್ಲವಾದರೆ ಮಾಮೂಲಿ 6000 ಹಣ ಕೊಡಬೇಕು ಎಂದು ಲಾರಿ ಮಾಲೀಕರು ಅಥವಾ ಚಾಲಕರು ಹಗಲು ದರೋಡೆ ಮಾಡುತ್ತಿರುವ ಆರೋಪಗಳು ಮರಳು ಗ್ರಾಹಕರದ್ದಾಗಿದೆ.