ಗುಂಡ್ಲುಪೇಟೆ: ಮಾರಿಹಬ್ಬದ ಸಂಭ್ರಮದಲ್ಲಿದ್ದ ಪಟ್ಟಣದ ಹೊಸೂರು ಬಡಾವಣೆಯ ವಿದ್ಯಾರ್ಥಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವ ಘಟನೆ ಮಂಗಳವಾರ ಸಂಭವಿಸಿದೆ.
ಪಟ್ಟಣದ ಹೊಸೂರು ಬಡಾವಣೆಯ ಮಾದನಾಯ್ಕ ಎಂಬುವರ ಪುತ್ರ ನಾಗರಾಜು (16) ಮೃತಪಟ್ಟ ದುರ್ದೈವಿ. ಈತ ಎಸ್ಎಸ್ಎಲ್ಸಿ ವಿದ್ಯಾರ್ಥೀಯಾಗಿದ್ದಾನೆ. ಬಡಾವಣೆಯಲ್ಲಿ ಗ್ರಾಮದೇವತೆ ಮಾರಮ್ಮನವರ ಹಬ್ಬದ ಹಿನ್ನಲೆಯಲ್ಲಿ ಮುಂಜಾನೆ ಕೊಂಡವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೊಂಡವನ್ನು ಯುವಕರು ಹಾಯುವ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದರು.
ಆದರೆ ದೇವಸ್ಥಾನದ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ ಮಳೆ ಬಂದಿದ್ದರಿಂದ ದೇವಸ್ಥಾನದ ಮುಂಭಾಗ ಹಾಕಿದ್ದ ಚಪ್ಪರ ಅಲುಗಾಡುತ್ತಿತ್ತು. ಈ ವೇಳೆ ವಿದ್ಯಾರ್ಥಿ ನಾಗರಾಜುಗೆ ವಿದ್ಯುತ್ ಸ್ಪರ್ಶಗೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರ ವಶಕ್ಕೆ ಶವವನ್ನು ನೀಡಲಾಯಿತು.