News Kannada
Sunday, January 29 2023

ಕರ್ನಾಟಕ

ಪ್ರತಾಪ್ ಸಿಂಹ ಅಸಹಾಯಕತೆ ವಿಷಾದಕರ: ಎಸ್ಡಿಪಿಐ ವ್ಯಂಗ್ಯ

Photo Credit :

ಪ್ರತಾಪ್ ಸಿಂಹ ಅಸಹಾಯಕತೆ ವಿಷಾದಕರ: ಎಸ್ಡಿಪಿಐ ವ್ಯಂಗ್ಯ

ಮಡಿಕೇರಿ: ಕೊಡಗು ಜಿಲ್ಲೆಯನ್ನು ನಿರಂತರವಾಗಿ ಮಾರಕ ರೋಗದ ರೀತಿಯಲ್ಲಿ ಕಾಡುತ್ತಿರುವ ಸೂಕ್ಷ್ಮ ಪರಿಸರ ವಲಯದ ಸಮಸ್ಯೆಯನ್ನು ತಮ್ಮ ಹೆಗಲಿಗೆ ಬಿಟ್ಟು ಬಿಡುವಂತೆ ಹೇಳಿಕೊಂಡಿದ್ದ ಸಂಸದ ಪ್ರತಾಪ ಸಿಂಹ ಅವರು ಇದೀಗ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ವಿಷಾದಕರವೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಜನಪ್ರತಿನಿಧಿಗಳು ಸಂಸತ್ ಮತ್ತು ವಿಧಾನ ಸಭೆಯಲ್ಲಿ ಒತ್ತಡ ಹೇರಿ ಸಮಸ್ಯೆಯನ್ನು ಬಗೆಹರಿಸುವ ಬದಲು ರಸ್ತೆಗಿಳಿದು ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡುವುದು ಶೋಚನೀಯ ನಿರ್ಧಾರವಾಗಿದೆ ಎಂದು ಆರೋಪಿಸಿದರು. ಅಧಿಕಾರಕ್ಕೆ ಬರುವ ಮೊದಲು ಡಾ. ಕಸ್ತೂರಿ ರಂಗನ್ ವರದಿ ವಿರುದ್ಧ ಗ್ರಾಮ, ಗ್ರಾಮದಲ್ಲಿ ಹೋರಾಟ ನಡೆಸಿದ ಪಕ್ಷದಿಂದ ಗೆದ್ದು ಬಂದು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಇದೀಗ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದರು.

ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆ ಹೊರತು ಕ್ಷುಲ್ಲಕ ರಾಜಕಾರಣ ಮಾಡಬಾರದೆಂದರು. ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದರು ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿದೆ. ರಾಜ್ಯದಲ್ಲಿರುವ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದ ಅಮೀನ್ ಮೊಹಿಸಿನ್ ಬಿಜೆಪಿ ಸಂಸದರಿರುವ ಪ್ರದೇಶದಲ್ಲೆ ಸೂಕ್ಷ್ಮ ಪರಿಸರ ವಲಯದ ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಃಪತನದತ್ತ ಸಾಗುತ್ತಿದ್ದು, ಕೊಡಗಿನಲ್ಲಿ ಕಾಂಗ್ರೆಸಿಗರಿಂದಲೇ ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆಯೆಂದು ಆರೋಪಿಸಿದರು. ಮಡಿಕೇರಿ ನಗರಸಭೆಯಲ್ಲಷ್ಟೆ ಕಾಂಗ್ರೆಸ್ ಆಡಳಿತವಿದ್ದು, ಇದನ್ನು ಕೂಡ ಉಳಿಸಿಕೊಳ್ಳಲಾಗದ ಕಾಂಗ್ರೆಸ್ಸಿಗರು ನಗರಸಭೆಯ ಅಧಿಕಾರವನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ ಎಂದು ಭವಿಷ್ಯ ನುಡಿದರು. ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕು ಬಣಗಳಾಗಿ ಬೇರ್ಪಟ್ಟಿದ್ದು, ಅಧ್ಯಕ್ಷರ ಮೇಲೆ ಉಪಾಧ್ಯಕ್ಷರು ಹಲ್ಲೆಗೆ ಮುಂದಾದರು ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಮಿನ್ ಮೊಹಿಸಿನ್ ಆರೋಪಿಸಿದರು.

ಸ್ಥಾಯಿ ಸಮಿತಿ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನ ಕೆಲವು ಸದಸ್ಯರು ನಗರ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ನಗರಸಭಾ ಅಧ್ಯಕ್ಷರನ್ನು ಕಾಂಗ್ರೆಸ್ಸಿಗರೆ ಕೆಳಕ್ಕಿಳಿಸುವ ಮುನ್ಸೂಚನೆ ದೊರೆತಿದ್ದು, ಪಕ್ಷ ಸರ್ವನಾಶದ ಅಂಚಿನಲ್ಲಿದೆಯೆಂದು ಆರೋಪಿಸಿದರು. ಅಭಿವೃದ್ಧಿಗೆ ಪೂರಕವಾದ ಹೋರಾಟಗಳನ್ನು ನಡೆಸುತ್ತಿರುವ ಎಸ್ಡಿಪಿಐನ್ನು ಬೆದರಿಕೆಯ ಮೂಲಕ ಮಣಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಯುಜಿಡಿ ಚರಂಡಿಯ ಮೂಲಕ ಕೇಬಲ್ ಅಳವಡಿಸುತ್ತಿರುವವರಿಂದ ನಗರಸಭೆಗೆ ಬರಬೇಕಾದ ಆದಾಯವನ್ನು ಸಂಗ್ರಹಿಸಬೇಕೆಂದು ಅಮಿನ್ ಒತ್ತಾಯಿಸಿದರು.

ನಗರಸಭಾ ಸದಸ್ಯ ಮನ್ಸೂರ್ ಮಾತನಾಡಿ, ನಗರಸಭಾ ಉಪಾಧ್ಯಕ್ಷರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕೆಂದು ಆಗ್ರಹಿಸಿದರು. ತೋಳ್ಬಲಕ್ಕೆ ಬೆದರುವುದಿಲ್ಲವೆಂದ ಅವರು, ವೈಯಕ್ತಿಕ ವಿಚಾರಗಳನ್ನು ಬಿಟ್ಟು ಜನಪರ ಕಾಳಜಿಯೊಂದಿಗೆ ಅಭಿವೃದ್ಧಿ ಪರ ಚಿಂತನೆಯನ್ನು ನಗರಸಭೆ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು.

ಸುರಭಿ ಹೋಟೆಲ್ ಬಳಿಯ ಇಂಟರ್ ಲಾಕ್ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿಯ ವಿಚಾರವನ್ನು ಎಳೆದು ತರಲಾಗಿದೆ. ಆದರೆ, ತಾವು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಇಷ್ಟು ವರ್ಷಗಳ ಕಾಲ ವಸತಿ ಮತ್ತು ಹಕ್ಕು ಪತ್ರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ರಾಜರಾಜೇಶ್ವರಿ ನಗರದ ಬಡ ನಿವಾಸಿಗಳಿಗೆ ನಾನು ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದೇನೆ. ಆದರೆ ಒಬ್ಬ ಮುಸ್ಲಿಮನಿಗೂ ಮನೆಯನ್ನು ನೀಡಿಲ್ಲ. ಜಾತಿ ಬಗ್ಗೆ ಟೀಕೆ ಮಾಡುವವರು ಇಷ್ಟು ವರ್ಷಗಳ ವರೆಗೆ ವಸತಿ ಸೌಲಭ್ಯವನ್ನು ಯಾಕೆ ದೊರಕಿಸಿಕೊಡಲಿಲ್ಲವೆಂದು ಮನ್ಸೂರ್ ಪ್ರಶ್ನಿಸಿದರು.

See also  ಬೆಳಗ್ಗೆ ಶಿಕ್ಷಕ... ಕುಡಿಯಲು ಕಿಸೆಯಲ್ಲಿ ಹಣವಿಲ್ಲದಿದ್ದರೆ ಭಿಕ್ಷುಕ...!

ಎಸ್ಡಿಪಿಐ ಸದಸ್ಯ ನೂರುದ್ದೀನ್ ಮಾತನಾಡಿ, ಕಳಪೆ ಎಂ ಸ್ಯಾಂಡ್ ನಿಂದಾಗಿ ಮಹದೇವಪೆೇಟೆ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆದಿರುವುದಾಗಿ ಆರೋಪಿಸಿದರು. ಇದಕ್ಕೆ ಮರಳಿನ ಕೊರತೆಯೇ ಕಾರಣವಾಗಿದ್ದು, ಜಿಲ್ಲಾಧಿಕಾರಿಗಳು ಮರಳಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ‘ಜಿಲ್ಲಾಧಿಕಾರಿ ಹಠಾವೋ’ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಮಾ.25 ರಂದು ನಡೆಯವ ದಿಡ್ಡಳ್ಳಿ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಕೆ.ಜೆ. ಪೀಟರ್ ಹಾಗೂ ನಗರಸಭಾ ಸದಸ್ಯರಾದ ನೀಮಾ ಅರ್ಷದ್ ಉಪಸ್ಥಿತರಿದ್ದರು. ಫೋಟೋ :: ಎಸ್ಡಿಪಿಐ
==========================================  
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು