ಗುಂಡ್ಲುಪೇಟೆ: ಸಚಿವ ಮಹದೇವಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿಷ್ಠೆ ದ್ವೇಷದ ರಾಜಕಾರಣಕ್ಕೆ ಎಡೆ ಮಾಡಿಕೊಡುತ್ತಿದೆಯಾ ಎಂಬ ಸಂಶಯ ಬರತೊಡಗಿದೆ.
ಸೋಮವಾರ ಕಾಂಗ್ರೆಸ್ ನಿಂದ ಗೀತಾಮಹದೇವಪ್ರಸಾದ್, ಬಿಜೆಪಿಯಿಂದ ಸಿ.ಎಸ್.ನಿರಂಜನ್ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯಿಂದಾಗಿ ಕಲ್ಲು ತೂರಾಟ ನಡೆದು 7 ಜನರಿಗೆ ಗಾಯವಾಗಿದೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಘಟನೆಯಿಂದ ನಾಲ್ವರು ಬಿಜೆಪಿ ಕಾರ್ಯಕರ್ತರು ಮತ್ತು ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿಯ ಕಾರ್ಯಕರ್ತರಾದ ಜಫಾವುಲ್ಲಾ (30), ಮಾದನಾಯ್ಕ(37), ಚಿಕ್ಕಾಟಿ ರಾಜಪ್ಪ(48), ಮಡಳ್ಳಿ ಕೀರ್ತಿ(23), ಎಎಸ್ಐ ನಾಗರಾಜು, ಪೇದೆಗಳಾದ ಮಂಜುನಾಥ್ ಸ್ವಾಮಿ, ನಾಗರಾಜು(ಸಿಂಗಂ) ಗಾಯಗೊಂಡವರಾಗಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಎಂಡಿಸಿಸಿ ಮುಂಭಾಗ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಂತರ ತಾಲೂಕು ಕಚೆೇರಿ ಸಭಾಂಗಣಕ್ಕೆ ಆಗಮಿಸಿದ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಸಂದರ್ಭದಲ್ಲಿ ಸುಮಾರು 1 ಘಂಟೆ ಕಾಲ ಚುನಾವಣೆಯಾಧಿಕಾರಿ ಪರಿಶೀಲನೆಯಲ್ಲಿ ತೊಡಗಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿ ಈ ಘಟನೆ ನಡೆಯಿತು ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರೂ ಕೂಡ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿ ಮುಂಭಾಗ ಮೆರವಣಿಗೆಯಲ್ಲಿ ಸಾಗಿಬಂದರು. ಈ ವೇಳೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರೂ ರಸ್ತೆಯಲ್ಲಿ ತುಂಬಿದ್ದ ಬಿಜೆಪಿ ಕಾರ್ಯಕರ್ತರಿಂದ ಬೇಸತ್ತ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೆೇರಿ ಒಳಗೆ ತೆರಳಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತು. ಇದನ್ನು ಗಮನಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಚುನಾವಣೆ ಮುಗಿಯುವುದರೊಳಗೆ ಇಲ್ಲಿ ಇನ್ನು ಏನೆಲ್ಲಾ ನಡೆಯಲಿದೆಯೋ ಎಂಬ ಭಯ ನಾಗರಿಕರಲ್ಲಿ ಆರಂಭವಾಗಿದೆ.