ಹಾಸನ: ಹೆಚ್ಪಿಸಿಎಲ್ ಪೆಟ್ರೋಲಿಯಂ ಕಾಖಾನೆಯು ಅತಿ ಅಪಾಯಕಾರಿ ಸಂಭವನೀಯ ಪಟ್ಟಿಗೆ ಸೇರಿರುವುದರಿಂದ ಸೂಕ್ತವಾದ ಅತ್ಯಾಧುನಿಕ ವಿಪತ್ತು ನಿರ್ವಹಣೆ ಸೇರ್ಪಡೆ ಆಗಬೇಕು ಎಂದು ಜಿಲ್ಲಾಧಿಕಾರಿ ವಿ. ಚೈತ್ರ ಅಭಿಪ್ರಾಯಪಟ್ಟರು.
ನಗರದ ಹೊರವಲಯ ಕೈಗಾರಿಕಾ ಪ್ರದೇಶದ ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಆವರಣದಲ್ಲಿ ಹಾಸನ್ ಟರ್ಮಿನಲ್, ಜಿಲ್ಲಾಡಳಿತ ಮತ್ತು ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕ ಸುರಕ್ಷತೆ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆ ಮತ್ತು ಅಣುಕು ಪ್ರದರ್ಶನದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ವಿಪತ್ತು ನಿರ್ವಹಣೆಗೆ ನಿಯಮಾನುಸಾರ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಜನರಿಗೆ ಎದುರಾಗಬಹುದಾದ ವಿಪತ್ತು ನಂತರ ಪರಿಹಾರೋಪಾಯಗಳು, ಸಂಚಾರಿ ನಿಯಂತ್ರಣಕ್ಕೆ ಅತ್ಯಾಧುನಿಕ ವಿಪತ್ತು ನಿರ್ವಹಣೆ ಸೇರ್ಪಡೆ ಆಗಬೇಕಾಗಿದೆ ಎಂದರು.
ಇದೇ ಪೆಟ್ರೋಲಿಯಂ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಕಂಡುಕೊಳ್ಳಬಹುದಾದ ರಕ್ಷಣಾ ನಿಯಮಗಳನ್ನು ಪ್ರದರ್ಶಿಸಿದರು. ಬೆಂಕಿ ಕಾಣಿಸಿಕೊಂಡ 2 ನಿಮಿಷದ ನಂತರ ನಿರಂತರ ಸೈರನ್ ಆರಂಬಿಸುತ್ತಿದ್ದಂತೆಯೇ ಅಲ್ಲಿನ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಮೊದಲಿಗೆ ಸ್ಥಳದಲ್ಲಿದ್ದ ಇತರೆ ವಾಹನವನ್ನು ತೆರವುಗೊಳಿಸಿದರು. ಬಳಿಕ ಬೆಂಕಿ ನಂದಿಸಲು ನೀರನ್ನು ಪೈಪ್ ಮೂಲಕ ಹರಿಸಲಾಯಿತು. ಬಳಿಕ ಗಾಯಾಳುಗಳನ್ನು ಸ್ಥಳದಿಂದ ಹೊರಕ್ಕೆ ಕೊಂಡೊಯ್ದರು. ನಂತರ ಬಂದ ತುರ್ತುವಾಹನದಲ್ಲಿ ಆತನನ್ನು ಕಳುಹಿಸಿ ರಕ್ಷಣೆ ಮಾಡಲಾಯಿತು.
ಕೆಲ ಕ್ಷಣದಲ್ಲಿಯೇ ಅಗ್ನಿಶಾಮಕ ದಳದ ವಾಹನದೊಂದಿಗೆ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.