ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಹ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದೆ. ಇದಲ್ಲದೆ ಹಲವೆಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮಾ.22 ರಂದು ಬಿ.ಜೆ.ಪಿ. ಪಕ್ಷದ ಉಮೇದುವಾರರಾದ ಸಿ.ಎಸ್. ನಿರಂಜನಕುಮಾರ್ ಅವರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಮತ್ತು 100 ರಿಂದ 150 ಕಾರ್ಯಕರ್ತರೊಡನೆ ಮತಯಾಚಿಸಲು ಗುಂಡ್ಲುಪೇಟೆ ಜಾಕೀರ್ ಹುಸೇನ್ ಬಡಾವಣೆಯಿಂದ ಮಹದೇವಪ್ರಸಾದ್ ನಗರದವರೆಗೆ ತೆರಳಲು ಚಾಮರಾಜನಗರ ತಾಲೂಕು ಯುವ ಮೋರ್ಚಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮೂರ್ತಿ ಅವರು ಅನುಮತಿ ಪಡೆದಿದ್ದರು. ಆದರೆ ಅನುಮತಿ ಪಡೆದಿರುವ ಸಂಖ್ಯೆಗಿಂತ ಹೆಚ್ಚು ಅಂದರೆ 600 ರಿಂದ 700 ವರೆಗೆ ಕಾರ್ಯಕರ್ತರು ಭಾಗವಹಿಸಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳಿ ಮತಯಾಚಿಸುವುದಾಗಿ ಅನುಮತಿ ಪಡೆದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಮತಯಾಚಿಸಿರುವುದು ಕಂಡು ಬಂದಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮದ್ಯ ಸಂಗ್ರಹಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳು ದಾಖಲಾಗಿವೆ ಕೊಳ್ಳೇಗಾಲ ತಾಲೂಕು ಸಿದ್ದಯ್ಯನಪುರ ಗ್ರಾಮದ ಮಹದೇವು ಅವರಿಂದ 0.630 ಮೀ. ಲೀಟರ್, ಚಾಮರಾಜನಗರ ತಾಲೂಕು ಹರವೆ ಹೋಬಳಿಯ ಮಲಿಯೂರು ಗ್ರಾಮದ ಬಸವಶೆಟ್ಟಿ ಅವರಿಂದ 0.360 ಮೀ. ಲೀಟರ್, ಹರವೆ ಗ್ರಾಮದ ಸಿದ್ದನಾಯ್ಕ ಮತ್ತು ಮಹದೇವಪ್ರಸಾದ್ ರವರಿಂದ 0.090 ಮೀ. ಲೀಟರ್ ಉಡಿಗಾಲ ಗ್ರಾಮದ ಮಲ್ಲೇಶ್ ರವರಿಂದ 0.630 ಮೀ. ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.