ರಾಮನಗರ: ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ರೌಡಿಶೀಟರ್ ಚಂದನ್ ಅಲಿಯಾಸ್ ಆಂಬೊಡೆ ಎಂಬಾತನ ಕೊಲೆಯಾಗಿತ್ತು. ಈ ಕೊಲೆ ಪ್ರಕರಣಕ್ಕೆ ಬೆನ್ನತ್ತಿದ ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಪ್ರಮುಖ ಆರೋಪಿ ಧ್ರ್ರುವಕುಮಾರ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣದ ಪಟೇಲರ ಬೀದಿ ವಾಸಿ ಧ್ರುವಕುಮಾರ್ ಅಲಿಯಾಸ್ ಧ್ರ್ರುವ ಬಿನ್ ಲೇಟ್ ರಾಮಸ್ವಾಮಿ, ಶಿವಾನಂದ ಟಾಕೀಸ್ ಹತ್ತಿರದ ವಾಸಿ ಮಧು ಬಿನ್ ಸಿದ್ದಪ್ಪ, ಮಾರುತಿ ಬಡಾವಣೆ ವಾಸಿ ಮರಿಸಿದ್ದೇಗೌಡ ಅಲಿಯಾಸ್ ಮರಿಸಿದ್ದ ಬಿನ್ ಬೈರಯ್ಯ. ಮಠದ ಬೀದಿ ವಾಸಿ ಸಂದೀಪ ಅಲಿಯಾಸ್ ಶಾಸ್ತ್ರಿ ಬಿನ್ ಲೇಟ್ ಪ್ರತಾಪ್ ಸಿಂಗ್, ಎಲೆಕೇರಿ ವಾಸಿಗಳಾದ ಮಹದೇವ ಬೀನ್ ಶ್ರೀನಿವಾಸ್ ಹಾಗೂ ಮಂಚೇಗೌಡ ಬಿನ್ ಶಿವಣ್ಣ, ರಾಮನಗರ ತಾಲೂಕಿನ ಅಚ್ಚಲು ಫ್ಯಾಕ್ಟರಿ ಬಳಿ ವಾಸಿಗಳಾದ ಬಸವರಾಜು ಬಿನ್ ಕೆಂಚಪ್ಪ, ರವಿ ಬಿನ್ ಲೇಟ್ ಕಾಂತರಾಜು ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರು ಆರೋಪಿಗಳಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿ ರೌಡಿ ಶೀಟರ್ ಧ್ರುವಕುಮಾರ್ ಮೇಲೆ ಕಳೆದ ಒಂದು ವರ್ಷದ ಹಿಂದೆ ಕೊಲೆಗೀಡಾದ ಚಂದನ್ ಮತ್ತು ಸಹಚರರು ರಾಮನಗರದಲ್ಲಿ ಹಲ್ಲೆ ಯತ್ನ ನಡೆಸಿದ್ದರು, ಈ ವಿಚಾರವಾಗಿ ಚಂದನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದೇ ಜಿದ್ದಿನಿಂದ ಧ್ರುವ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮಾ.17ರ ಸಂಜೆ ಚಂದನ್ ತನ್ನ ಸ್ನೇಹಿತರಾದ ಯೋಗೀಶ್ ಮತ್ತು ಅಪ್ಪಿ ಎಂಬುವರೊಂದಿಗೆ ಸಾತನೂರು ರಸ್ತೆಯಲ್ಲಿ ಹೋಗುತ್ತಿದ್ದುದನ್ನು ಖಚಿತಪಡಿಸಿಕೊಂಡ ಧ್ರುವಕುಮಾರ್ ತನ್ನ ಸಹಚರರೊಂದಿಗೆ ದಾಳಿ ಮಾಡಿದ್ದಾರೆ. ಮಧು ಅಲಿಯಾಸ್ ಕೋಟೆ ಮಧು, ಮರಿಸಿದ್ದ, ಸಂತೋಷ್ ಹಾಗೂ ಇತರರು ಕಾರುಗಳಲ್ಲಿ ಬಂದಿದ್ದಾರೆ. ಏಕಾಏಕಿ ಮಾರಾಕಾಸ್ತ್ರಗಳಿಂದ ಚಂದನ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದನ್ನು ಕಂಡ ಯೋಗೀಶ್ ಮತ್ತು ಅಪ್ಪಿ ಎಂಬಾತರು ಭಯಭೀತರಾಗಿ ಅಲ್ಲಿಂದ ಓಡಿ ಹೋಗಿದ್ದರು.
ಬಂಧಿತ ಆರೋಪಿಗಳ ಪೈಕಿ ಐದು ಮಂದಿ ವೃತ್ತಿಯಲ್ಲಿ ಆಟೋ ಚಾಲಕರು ಮತ್ತು ಒಬ್ಬ ಬಾರ್ ಬೈಂಡಿಂಗ್ ಕೆಲಸ ಮಾಡುತ್ತಾನೆ, ಇವರೆಲ್ಲರೂ ಇನ್ನೂ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹೆಚ್ಚಿನ ವಿಚಾರಣೆ ನಡೆಸುವ ಉದ್ದೇಶದಿಂದ ಆರೋಪಿಗಳನ್ನು ಸಿ.ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪುನಹ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.