ಗುಂಡ್ಲುಪೇಟೆ: ಗುಂಡ್ಲುಪೇಟೆ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಆರಂಭವಾಗಿದ್ದು, ಎರಡು ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ರೋಡ್ ಶೋ, ಚುನಾವಣಾ ಪ್ರಚಾರಸಭೆ, ಮನೆಮನೆ ಭೇಟಿ ಹೀಗೆ ವಿವಿಧ ರೀತಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮತಯಾಚನೆಯ ಸಂದರ್ಭ ಅಲ್ಲಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಪ್ರಕರಣಗಳು ಒಂದೆಡೆ ದಾಖಲಾಗುತ್ತಿದ್ದರೆ, ಮತ್ತೊಂದೆಡೆ ಅಕ್ರಮ ಮದ್ಯ ಮಾರಾಟಗಾರರ ಮೇಲೆಯೂ ನಿಗಾ ವಹಿಸಿ ದಾಳಿ ಮಾಡಿ ವಶಪಡಿಸಿಕೊಳ್ಳಲಾಗುತ್ತಿದೆ.
ಈ ನಡುವೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗುಂಡ್ಲುಪೇಟೆ ಪಟ್ಟಣದಲ್ಲಿ ಮಿಂಚಿನ ದಾಳಿ ನಡೆಸಿ ವಾಹನಗಳ ತಪಾಸಣೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಸುಮಾರು 68 ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಲ್ಲದೆ, 15 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಂಟಿ ಸಾರಿಗೆ ಆಯುಕ್ತ ಡಾ.ಸಿ.ಟಿ.ಮೂರ್ತಿ ನೇತೃತ್ವದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಪ್ರಭುಸ್ವಾಮಿ, ಇನ್ಸ್ಪೆಕ್ಟರ್ ವಿಜಯೇಂದ್ರ ಹಾಗೂ ಸಿಬ್ಬಂದಿ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿದರು.
ಪ್ರವಾಸಿ ಮಂದಿರದ ಬಳಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅಧಿಕ ಭಾರದ ಕಲ್ಲುಗಳನ್ನು ಹಾಗೂ ಸರಕುಗಳನ್ನು ಹೊತ್ತು ಸಾಗಾಣೆ ಮಾಡುತ್ತಿದ್ದ ಲಾರಿಗಳು, ಹೆಲ್ಮೆಟ್ ಧರಿಸದೆ ಪರವಾನಗಿ ಇಲ್ಲದೆ ಸವಾರಿ ಮಾಡುತ್ತಿದ್ದ ಬೈಕುಗಳು, ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸರಕು ಸಾಗಾಣೆ ವಾಹನಗಳು ಸೇರಿದಂತೆ ನೂರಾರು ವಾಹನಗಳ ತಪಾಸಣೆ ನಡೆಸಿದ್ದಾರೆ.
ಮತ್ತೊಂದೆಡೆ ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ತೆರೆಯಲಾದ ಹನ್ನೊಂದು ಚೆಕ್ಪೋಸ್ಟ್ ಗಳ ಪೈಕಿ ಮದ್ದೂರು ಚೆಕ್ಪೋಸ್ಟ್ ನ ತಪಾಸಣಾ ಕೇಂದ್ರದಲ್ಲಿ ವಾಹನಗಳನ್ನು ತಪಾಸಣೆ ಮಾಡದೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇಲ್ಲಿ ವಾಹನಗಳು ಅವುಗಳ ಪಾಡಿಗೆ ತೆರಳುತ್ತಿದ್ದು, ಯಾರೂ ತಪಾಸಣೆ ಮಾಡುತ್ತಿಲ್ಲ ಎಂಬುವುದು ಸಾರ್ವಜನಿಕರ ದೂರಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಹನ್ನೊಂದು ಚೆಕ್ಪೋಸ್ಟ್ ತೆರೆಯಲಾಗಿದ್ದು, ಒಬ್ಬ ಎಎಸ್ಐ, ಪೊಲೀಸ್ ಪೇದೆ, ಗ್ರಾಮಲೆಕ್ಕಾಧಿಕಾರಿ ಹಾಗೂ ಅರಣ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದ್ದೂರು ಚೆಕ್ಪೋಸ್ಟ್ ನಲ್ಲಿ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡದೆ ತಪಾಸಣೆ ನೆಪದಲ್ಲಿ ಕೇರಳಕ್ಕೆ ತೆರಳುವ ತರಕಾರಿ ಟೆಂಪೋ, ಆಟೋ, ಲಾರಿಗಳಿಂದ ಹಣ ವಸೂಲಿ ಮಾಡುತ್ತಾ ಕಿರುಕುಳ ನೀಡಲಾಗುತ್ತಿದೆ ಎಂಬುದು ವಾಹನ ಚಾಲಕರ ಮತ್ತು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಗಮನಹರಿಸಬೇಕಾಗಿದೆ.