ಮಡಿಕೇರಿ: ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡ ಕಾವೇರಿ ತಾಲ್ಲೂಕು ರಚನೆಯ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಕಾವೇರಿ ತಾಲ್ಲೂಕು ಹೋರಾಟ ಸಮಿತಿ ನೂತನ ತಾಲ್ಲೂಕಿಗೆ ಒಳಪಡುವ 19 ಗ್ರಾಮ ಪಂಚಾಯ್ತಿ ಸ್ಥಾನೀಯ ಸಮಿತಿಗಳಿಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಾಲ್ಲೂಕು ರಚನೆಯ ಹೋರಾಟಕ್ಕೆ ಹಿನ್ನಡೆಯಾಗಿಲ್ಲವೆಂದು ಸ್ಪಷ್ಟಪಡಿಸಿದರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾವೇರಿ ತಾಲ್ಲೂಕನ್ನು ಬೆಂಬಲಿಸುವವರಿಗೆ ಮಾತ್ರ ಮತ ಎನ್ನುವ ಹೊಸ ಹೋರಾಟದ ಹಾದಿಯನ್ನು ಕಂಡುಕೊಳ್ಳುವ ಮೂಲಕ ಮುನ್ನಡೆಯುವುದಾಗಿ ತಿಳಿಸಿದರು.
ರಾಜಕೀಯವಾಗಿ 19 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರನ್ನು ಕಡೆಗಣಿಸುವಂತಿಲ್ಲವೆಂದು ಅಭಿಪ್ರಾಯಪಟ್ಟ ಅವರು, ಜನಜಾಗೃತಿ ಮತ್ತು ಜನಾಂದೋಲನದ ಮೂಲಕ ಕಾವೇರಿ ತಾಲ್ಲೂಕನ್ನು ಪಡೆಯುವುದಾಗಿ ತಿಳಿಸಿದರು. ಎರಡು ತಿಂಗಳ ಹಿಂದೆ ಕುಶಾಲನಗರಕ್ಕೆ ವಿಶೇಷ ತಹಸೀಲ್ದಾರರನ್ನು ನೇಮಿಸಬೇಕೆನ್ನುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಹಿ ಹಾಕಿದ ಹಿನ್ನೆಲೆಯಲ್ಲಿ ತಾಲ್ಲೂಕು ರಚನೆಯ ಬೇಡಿಕೆಯಲ್ಲಿ ಸಮಿತಿ ಮೈಮರೆತದ್ದು ನಿಜವೆಂದು ಶಶಿಧರ್ ಒಪ್ಪಿಕೊಂಡರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ನೂತನ ತಾಲ್ಲೂಕುಗಳ ಪಟ್ಟಿಯಲ್ಲಿ ಕಾವೇರಿ ತಾಲ್ಲೂಕು ರಚನೆ ಪ್ರಸ್ತಾಪವೂ ಇದ್ದ ಕಾರಣ ಸರ್ಕಾರ ತಾಲ್ಲೂಕನ್ನು ಘೋಷಿಸುತ್ತದೆ ಎನ್ನುವ ಸಂಪೂರ್ಣ ವಿಶ್ವಾಸವಿತ್ತು. ಆದರೆ, ಈ ಬಜೆಟ್ ಸಂದರ್ಭದಲ್ಲಿ ನೂತನ ತಾಲ್ಲೂಕುಗಳು ಘೋಷಣೆಯಾಗುತ್ತವೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲವೆಂದರು.
ತಾಲ್ಲೂಕು ರಚನೆಯಾದರೆ, ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟ ವಿ.ಪಿ.ಶಶಿಧರ್, ಅಗತ್ಯವಿರುವ ಎಲ್ಲಾ ಕಛೇರಿಗಳು ಮತ್ತು ವ್ಯವಸ್ಥೆಗಳು ಇವೆ ಎಂದರು. ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಇರುವುದರಿಂದ ಈ ಬಗ್ಗೆಯೂ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. 2007 ರಲ್ಲಿ ಎಂ.ಪಿ.ಪ್ರಕಾಶ್ ಅವರ ವರದಿ ಕಾವೇರಿ ತಾಲ್ಲೂಕು ಪರವಾಗಿರದ ಕಾರಣ ಇಷ್ಟು ಹಿನ್ನಡೆಯಾಗಿದೆಯೆಂದು ಆರೋಪಿಸಿದ ಅವರು, ಇನ್ನು ಮುಂದೆ ತಾಲ್ಲೂಕು ರಚನೆಯಾಗುವವರೆಗೆ ವಿರಮಿಸುವ ಮಾತೇ ಇಲ್ಲವೆಂದರು.
ಕಾವೇರಿ ತಾಲ್ಲೂಕು ರಚನೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕನಸಾಗಿದ್ದು, ಇದೀಗ ಅವರ ಪುತ್ರ ದಿನೇಶ್ ಗುಂಡೂರಾವ್ ಅವರು ಹೋರಾಟಕ್ಕೆ ಪೂರಕವಾಗಿ ಬೆಂಬಲ ನೀಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಕೂಡ ಅಧಿವೇಶನದಲ್ಲಿ ಕಾವೇರಿ ತಾಲ್ಲೂಕು ರಚನೆಯ ಕುರಿತು ಪ್ರಸ್ತಾಪಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀವಾಗಿ ಎಲ್ಲಾ ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು, ವರ್ತಕರು, ಉದ್ಯಮಿಗಳು, ರಾಜಕಾರಣಿಗಳು ಒಂದೇ ಧ್ವನಿಯಾಗಿ ಹೋರಾಟ ನಡೆಸುತ್ತಿದ್ದು, ಇದಕ್ಕೆ ಫಲ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಕಾವೇರಿ ತಾಲ್ಲೂಕು ಹೋರಾಟ ಸಮಿತಿ ಸಲ್ಲಿಸಿದ ಮನವಿ ಈಗಲೂ ಇದ್ದು, ಇದಕ್ಕೆ ಜೀವ ದೊರೆಯಲಿದೆ ಎಂದು ವಿ.ಪಿ.ಶಶಿಧರ್ ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಾಬು ಮಾತನಾಡಿ, ಕಾವೇರಿ ತಾಲ್ಲೂಕಿನ ಪ್ರಸ್ತಾವನೆಯನ್ನು ಕೈಬಿಡಲು ರಾಜಕೀಯ ಹಸ್ತಕ್ಷೇಪವೂ ಒಂದು ಕಾರಣವೆಂದು ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯ್ತಿಗಳೆ ತಾಲ್ಲೂಕುಗಳಾಗಿರುವಾಗ ಪಟ್ಟಣ ಪಂಚಾಯ್ತಿ ಆಗಿರುವ ಕುಶಾಲನಗರ ಏತಕ್ಕೆ ತಾಲ್ಲೂಕು ಆಗಬಾರದೆಂದು ಪ್ರಶ್ನಿಸಿದರು. ಹೆಚ್.ಡಿ.ಕುಮಾರಸ್ವಾಮಿ ತಯಾರಿಸಿದ ಪಟ್ಟಿಯಲ್ಲಿದ್ದ ಕಾವೇರಿ ತಾಲ್ಲೂಕಿನ ಪ್ರಸ್ತಾವನೆಯನ್ನು ನಂತರ ಬಂದ ಸರ್ಕಾರಗಳು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರು ಹಾಗೂ ಜಿಪಂ ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳಾ, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರಾದ ಶರವಣ ಕುಮಾರ್ ಹಾಗೂ ಬಿಜೆಪಿ ಪ್ರಮುಖರಾದ ಎಂ.ವಿ. ನಾರಾಯಣ ಉಪಸ್ಥಿತರಿದ್ದರು. ಫೋಟೋ :: ಕಾವೇರಿ ತಾಲ್ಲೂಕು
===========================================