ಹಾಸನ: ಸಂಪ್ರದಾಯ ಹಾಗೂ ಹಿಂದಿನ ನಂಬಿಕೆ ಮೂಲಕ ದೇವರನ್ನು ನಂಬುತ್ತಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದರು.
ನಗರದ ಸಮೀಪವಿರುವ ತಣ್ಣಿರುಹಳ್ಳದ ಬಳಿ ದೊಡ್ಡಮಂಡಿಗನಹಳ್ಳಿಯಲ್ಲಿರುವ ಶ್ರೀ ಗುಹೆಕಲ್ಲಮ್ಮ ಶ್ರೀ ಚಿಕ್ಕಮ್ಮ ದೇವಾಲಯ ಮತ್ತು ಪ್ಲೇಗಮ್ಮ ದೇವಾಲಯದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಿಕ್ಕಮ್ಮದೇವಿ ಪ್ರತಿಷ್ಠಾಪನೆ, ಗೋಪುರದ ಕಳಸ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇವರನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದರೂ ದೇವರು ಒಬ್ಬನೇ. ದುಷ್ಟರನ್ನು ಕೊಲ್ಲಲು ದೇವರು ಬೇರೆ ಬೇರೆ ಅವತಾರದಲ್ಲಿ ಬಂದಿದ್ದು ನಾನು ಎಲ್ಲಾ ದೇವರಿಗೂ ನಮಸ್ಕರಿಸುತ್ತೇನೆ ಎಂದರು. ವೇದ, ಉಪನಿಷತ್ತನ್ನು ನಾನು ಅಭ್ಯಸಿಸಿಲ್ಲ. ಆದರೂ ದೇವರನ್ನು ನಂಬುತ್ತೇವೆ. ನಂಬಿಕೆ ಎನ್ನುವುದು ನಿಜವಾದ ಭಕ್ತಿಯ ಸಂಕೇತ. ತಾಯಿ ಶಕ್ತಿ ದೇವತೆ ಆಗಿದ್ದಾಳೆ. ಎಲ್ಲ ದೇವರು ಕೂಡ ನಂಬಿಕೆಗೆ ಆಶೀರ್ವಾದ ಮಾಡುತ್ತಾರೆಂದು ಹೇಳಿದರು.
ನನ್ನ ಜೀವಿತವಧಿಯಲ್ಲಿ ಈಗಾಗಲೇ ಸಕ್ರಿಯವಾಗಿ 50 ವರ್ಷಗಳಿಂದ ರಾಜಕೀಯ ಮಾಡಿದ್ದೇನೆ. ಸುದೀರ್ಘ ರಾಜಕಾರಣಕ್ಕೆ ಹಾಸನ ಜಿಲ್ಲೆಯ ಜನತೆ ಶಕ್ತಿ ತುಂಬಿದ್ದಾರೆ. ನನ್ನ ಉಸಿರು ಇರುವವರೆಗೂ ಜನಪರ ಕೆಲಸ ಮಾಡುವುದಾಗಿ ತಿಳಿಸಿದರು. ಆದರೇ ನನ್ನ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಅಲ್ಪ ಅಭಿವೃದ್ಧಿಯಾಗಿದೆಯಷ್ಟೆ. ಸಂಪೂರ್ಣ ಅಭಿವೃದ್ಧಿಯಾಗಿಲ್ಲ ಎಂಬ ನೋವು ಕಾಡುತ್ತಿದೆ ಎಂದರು. ಕುಡಿಯಲು ನೀರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಅಣೆಕಟ್ಟಿನಲ್ಲಿ ನೀರು ಇಲ್ಲದಿದ್ದರೂ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಲಾಗಿದ್ದು ಇಂದಿನ ದಿನಗಳ ಪರಿಸ್ಥಿತಿಯನ್ನು ನೆನೆದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ದೊಡ್ಡಮಂಡಿಗನಹಳ್ಳಿಯಲ್ಲಿರುವ ಶ್ರೀ ಗುಹೆಕಲ್ಲಮ್ಮ, ಶ್ರೀ ಚಿಕ್ಕಮ್ಮ ದೇವಾಲಯ ಮತ್ತು ಪ್ಲೇಗಮ್ಮ ದೇವಾಲಯಕ್ಕೆ ತೆರಳಿದ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿ ಭಕ್ತಿಯಿಂದ ದೇವಿಗೆ ನಮಿಸಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶಾಸಕ ಹೆಚ್.ಎಸ್. ಪ್ರಕಾಶ್, ಜೆಡಿಎಸ್ ಮುಖಂಡ ಕೆ.ಎಂ. ರಾಜೇಗೌಡ, ನಗರಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಕಂದಲಿ ಕ್ಷೇತ್ರದ ಜಿಪಂ ಸದಸ್ಯ ಹೆಚ್.ಪಿ. ಸ್ವರೂಪ್, ನಗರಸಭೆ ಮಾಜಿ ಉಪಾಧ್ಯಕ್ಷ ಚಂದ್ರೇಗೌಡ, ಕೃಷ್ಣಕುಮಾರ್, ನಿಂಗರಾಜು ಇತರರು ಇದ್ದರು.