ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಬೆಂಗಳೂರಿನ ಅನೇಕಲ್ ನಲ್ಲಿ ಪ್ರತಿಭಟನೆಯೊಂದರಲ್ಲಿ ಕತ್ತಿ ಹಿಡಿಯುವ ಮತ್ತು ರಕ್ತದೋಕುಳಿ ನಡೆಸುವ ಹೇಳಿಕೆ ಸಮಾಜದ ಸ್ವಾಸ್ಥ ಕೆಡಿಸುವ ಪ್ರಚೋಧನಾಕಾರಿಯಾಗಿದ್ದ ಸರ್ಕಾರ ಅವರ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಅನೇಕಲ್ ನಲ್ಲಿ ನಡೆದ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಪಕ್ಷದ ಕಾರ್ಯಕರ್ತರ ಜೊತೆಗೆ ಸಮಾಜವನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ. ಇದುವರೆಗೂ ಬಾವುಟ ಹಿಡಿದ ಕೈಗಳು ಕತ್ತಿ ಹಿಡಿಯಬೇಕಾಗುತ್ತದೆ. ರಕ್ತದೋಕುಳಿ ಹರಿಸಬೇಕಾಗುತ್ತದೆ’ ಎಂದಿದ್ದಾರೆ. ಜನರಿಂದ ಚುನಾಯಿತರಾಗಿರುವ ಅವರು ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಇಂತಹದೇ ಪ್ರಚೋಧನಾಕಾರಿ ಹೇಳಿಕೆ ನೀಡುತ್ತಿದ್ದ ಸಂಸದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕೂಡ ಅದೇ ವರಸೆಗೆ ಜಾರಿದ್ದಾರೆ. ಈ ಹಿಂದೆ ರವಿ ಅವರ ಹಿರಿಯಣ್ಣನಂತಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗ್ಡೆ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಇಂತಹ ಹೇಳಿಕೆಗಳನ್ನು ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದರು. ಅವರ ಹೇಳಿಕೆ ಬಗ್ಗೆ ಮುಂದೆ ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿ ಈ ಬಾರಿ ಬಜೆಟ್ ನಲ್ಲಿ ಜಿಲ್ಲೆಗೆ ಬಹಳಷ್ಟು ಕೊಡುಗೆ ನೀಡಿದ್ದರೂ ಶಾಸಕ ಸಿ.ಟಿ.ರವಿ ಬಜೆಟ್ ಪುಸ್ತಕವನ್ನು ಓದದೆ ಟೀಕಿಸಿದ್ದಾರೆ. ಮೆಡಿಕಲ್ ಕಾಲೇಜ್ ಮತ್ತು ಬೆಳವಾಡಿ ಕೆರೆ ಯೋಜನೆ ಬಗ್ಗೆ ಹಣ ಮೀಸಲಿರಿಸಿಲ್ಲ ಎಂಬುದು ಅವರ ಆರೋಪವಾಗಿದೆ. ಆದರೆ ಈ 2 ಯೋಜನೆಗಳಿಗೆ ಆಯಾಯ ಇಲಾಖೆಗೆ ಹಣ ಒದಗಿಸಲಾಗಿದ್ದು ಅದನ್ನು ಶಾಸಕರು ಗಮನಿಸಬೇಕು ಎಂದು ಸಲಹೆ ನೀಡಿದರು.