ಚಿಕ್ಕಮಗಳೂರು: ಚಿಕ್ಕಮಗಳೂರು ಅಂದಾಕ್ಷಣ ತಟ್ಟನೆ ನೆನಪಾಗೋದು ಕಾಫಿ, ಮೆಣಸು, ಅಡಿಕೆ, ಅದ್ರಲ್ಲೂ ಕಡೂರು, ಶೃಂಗೇರಿ, ತರೀಕೆರೆ, ನರಸಿಂಹರಾಜಪುರ ಅಡಿಕೆಗೆ ಫೇಮಸ್. ಕೆಲಸಗಾರರ ಸಮಸ್ಯೆ, ಕಡಿಮೆ ಲಾಭ, ಕುಂಠಿತಗೊಂಡ ಇಳುವರಿ, ಮಳೆ ಹೀಗೆ ನಾನಾ ಸಮಸ್ಯೆಗಳಿದ್ರು ಬೆಳೆಗಾರರು ಅಡಿಕೆ ಬೆಳೆಯೊದನ್ನ ಬಿಡಲಿಲ್ಲ. ಹೀಗೆ ಹಲವು ಸಂಕಷ್ಟಗಳ ನಡುವೆಯೂ ಅಡಿಕೆ ಬೆಳೆದ ಬೆಳೆಗಾರರ ಮೊಗದಲ್ಲೀಗ ಎಲ್ಲಿಲ್ಲದ ಮಂದಹಾಸ.
ಕಳೆದ ವರ್ಷ ಕ್ವಿಂಟಾಲ್ ಗೆ 30 ಸಾವಿರ ಗಡಿಯೇ ದಾಟದ ಅಡಿಕೆ ಬೆಲೆ ಇದೀಗ 43 ಸಾವಿರದ ಗಡಿ ತಲುಪಿರೋದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಅಡಿಕೆ ನಿಷೇಧದ ಗೊಂದಲದ ನಡೆವೆಯೂ ಈ ಬೆಳವಣಿಗೆ ಅಡಿಕೆ ಬೆಳೆಗಾರರಿಗೆ ಡಬಲ್ ಧಮಾಕ ತಂದಿದೆ. ಕಾಫಿನಾಡು ಚಿಕ್ಕಮಗಳೂರು, ಮೂಡಿಗೆರೆ ಕಾಫಿ, ಮೆಣಸಿಗೆ ಹೆಸರಾದ್ರೆ, ಮಲೆನಾಡು ಎನ್ನಿಸಿಕೊಂಡಿರೋ ಶೃಂಗೇರಿ, ನರಸಿಂಹರಾಜಪುರ ಹೆಚ್ಚಾಗಿ ಅಡಿಕೆ ಬೆಳೆಯುತ್ತಾರೆ. ಬಯಲು ಸೀಮೆ ಕಡೂರು, ಬೀರೂರು, ತರೀಕೆರೆಯಲ್ಲೂ ಅಡಿಕೆಗೆ ಅಗ್ರಸ್ಥಾನ. ಅಡಿಕೆಯನ್ನ ಕೊಯ್ದು ಅಡಿಕೆ ಮಂಡಿಗೆ ತಂದು ಹಾಕುವಷ್ಟರಲ್ಲಿ ಅಷ್ಟೆ ಸಂಕಷ್ಟಗಳನ್ನ ಎದುರಿಸ್ತಾರೆ ಅಡಿಕೆ ಬೆಳೆಗಾರರು. ಕೆಲವೊಮ್ಮೆ ಹಾಕಿದ ಬಂಡವಾಳವೂ ಸಿಗದೆ ನಷ್ಟ ಅನುಭವಿಸಿದ ಸಾಕಷ್ಟು ಉದಾಹರಣೆಗಳಿವೆ.
ಅಡಿಕೆ ಬೆಳೆಯಲ್ಲಿ ಲಾಭ ಬಾರದ ಕಾರಣ ಎಷ್ಟೋ ಜನ ತೋಟ ಮಾರಿ ಸಾಲ ತೀರಿಸಿದ್ದು ಇದೆ. ಆದರೆ ಈ ಬಾರಿ ಅಡಿಕೆ ಬೆಳೆಗಾರರ ಅದೃಷ್ಟ ಹಾಗಿಲ್ಲ. ಕಳೆದ 2 ವರ್ಷಗಳ ಕಾಲ ಅನುಭವಿಸಿದ ನಷ್ಟವನ್ನ ಒಂದೇ ಬಾರಿ ತುಂಬಿಸಿಕೊಂಡಿದ್ದಾರೆ. ಕ್ವಿಂಟಾಲ್ ಗೆ ಅಡಿಕೆ ದರ 43 ಸಾವಿರ ಆಗಿರೋದು ಎಲ್ಲಿಲ್ಲದ ಖುಷಿ ತರೋದ್ರ ಜೊತೆ ಮತ್ತಷ್ಟು ವ್ಯವಹಾರಿಸೋ ಧೈರ್ಯ ತಂದಿದೆ. ಈ ಬಾರಿ ಅಡಿಕೆ ಬೆಳೆಗಾರರಿಗೆ ಇಷ್ಟು ದೊಡ್ಡ ಮಟ್ಟದ ಲಾಟರಿ ಹೊಡೆದಿದ್ರು ಕೂಡ ಈ ಬೆಲೆ ರೈತರಿಗೆ ಸಿಕ್ಕಿಲ್ಲ. ಬದಲಾಗಿ ಮಧ್ಯವರ್ತಿಗಳಿಗೆ ಸಿಕ್ಕಿದೆ ಅನ್ನೋ ಮಾತು ಎಲ್ಲರಿಗೂ ಗೊತ್ತು. ಆದರೆ ಎಲ್ಲಾ ರೈತರು ಅಡಿಕೆಯನ್ನ ಮಂಡಿಗೆ ಹಾಕಿರೋಲ್ಲ. ಇಂದಲ್ಲ ನಾಳೆ ಒಳ್ಳೆಯ ದರ ಸಿಗಬಹುದೆಂದು ಅಡಿಕೆಯನ್ನ ಗೋಡಾನ್ ಗಳಲ್ಲಿ ಶೇಖರಿಸಿರೋ ಶ್ರೀಮಂತ ಬೆಳೆಗಾರರಿಗೆ ಒಳ್ಳೆಯ ದರ ಲಭಿಸಿದೆ. ಇನ್ನೂ ಮುಂದೆಯೂ ಇದೇ ದರ ಇರಲಿ ಅನ್ನೋದು ಅಡಿಕೆ ಬೆಳೆಗಾರರ ಆಶಯ.
ಅಡಿಕೆ ದರ ಹೀಗೆ ಗಗನಕ್ಕೆ ಮುಟ್ಟಿರೋದ್ರಿಂದ ಮಲೆನಾಡಿನ ಕೆಲ ಭಾಗದಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಕೂಲಿಯನ್ನ ಜಾಸ್ತಿ ಮಾಡಲಾಗಿದೆ. ಒಟ್ನಲ್ಲಿ, ಅಡಿಕೆ ದರ ಹೀಗೆ ಈ ವರ್ಷ ದಾಖಲೆ ಮುಟ್ಟಿರೋದು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ವ್ಯವಹಾರಿಕ ದೃಷ್ಟಿಯಿಂದ ಅಡಿಕೆ ದರ ಮತ್ತಷ್ಟು ದುಬಾರಿಯಾದರೂ ಆಶ್ವರ್ಯವಿಲ್ಲ.
ಒಟ್ಟಾರೆಯಾಗಿ ಅಡಿಕೆ ದರ ಹೀಗೆ ದಾಖಲೆ ಏರಿಕೆ ಕಂಡಿರೋದು ಎಲ್ಲಾ ಅಡಿಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ. ಅಡಿಕೆ ಮರಗಳನ್ನು ಕಡಿದು ಬೇರೆ ಬೆಳೆ ಬೆಳೆಯಲು ಮುಂದಾದ ಕೆಲ ರೈತರು ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ಅದೇನೆ ಇದ್ರೂ, ಮುಂದಿನ ದಿನಗಳಲ್ಲಿ ಅಡಿಕೆ ದರ ಹೀಗೆ ಇದ್ದು ರೈತರ ಶ್ರಮ ಮಧ್ಯವರ್ತಿಗಳ ಪಾಲಾಗ್ದೆ ಇರಲಿ ಅನ್ನೋದು ಎಲ್ಲರ ಆಶಯ.