ಮೂಡಿಗೆರೆ: ಮಲೆನಾಡಿನ ಸುತ್ತಮುತ್ತಲಲ್ಲಿ ನಾಗರಹಾವು ಅಥವಾ ಕಾಳಿಂಗಸರ್ಪ ಕಾಣಿಸಿಕೊಂಡರೆ ಸಾಕು ಸ್ನೇಕ್ ಆರೀಪ್ ಉರಗವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುತ್ತಾರೆ. ಆದರೆ ಹಾವು ಹಿಡಿಯುವ ಚಾಲಕಿತನ ಯಾಮಾರಿದರೆ ಮೃತ್ಯುವಿಗೆ ನೇರ ಆಹ್ವಾನ ಮಾಡಿದಂತೆ ಆಗುತ್ತದೆ.
ಈ ನಿಟ್ಟಿನಲ್ಲಿ ಉರಗ ಪ್ರೇಮಿ ಸ್ನೇಕ್ ಆರೀಪ್ ಹಾವು ಹಿಡಿಯುವ ಕಿಟ್ ಮತ್ತು ಪಸ್ಟ್ಹೆಡ್ ಕಿಟ್ ಸಲಕರಣೆಯ ಸೌಲಭ್ಯಗಳನ್ನು ನೀಡುವಂತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಣಕಲ್ ನ ಸ್ನೇಕ್ ಆರೀಪ್, ಜೀವಕ್ಕೆ ಕುತ್ತು ತರುವ ಹಾವುಗಳು ಗ್ರಾಮಗಳಲ್ಲಿ ಮನೆಯ ಸಮೀಪ ಓಡಾಡುತ್ತಿದ್ದರೆ ಹಾವನ್ನು ಹಿಡಿಯಲು ಜನರು ಆರೀಪ್ ನನ್ನು ಕರೆಸುತ್ತಿದ್ದರು. ಆದರೆ ಹಾವು ಹಿಡಿಯುವುದು ಸುಲಭದ ಕೆಲಸವಲ್ಲ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ ಬಂದು ಒದಗುತ್ತದೆ. ಹಾವು ಹಿಡಿಯುವ ಉರಗ ಪ್ರೇಮಿಗಳಿಗೆ ಸರಕಾರದಿಂದ ಅರಣ್ಯಾಧಿಕಾರಿಗಳು ಉಚಿತ ಸಲಕರಣೆಗಳನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸುಮಾರು 400 ಹಾವುಗಳನ್ನು ಹಿಡಿದಿರುವ ಸ್ನೇಕ್ ಆರೀಪ್ ಬಣಕಲ್ ಸಾಮಾಜಿಕ ಕ್ಷೇತ್ರಗಳಲ್ಲಿ ಈ ಕೆಲಸದಿಂದ ಗುರುತಿಸಿಕೊಂಡಿದ್ದಾರೆ. ಸರ್ಪಗಳನ್ನು ಹಿಡಿಯಲು ಅವರು ನೇರ ಕೈಗಳನ್ನು ಬಳಸಿ ಹೆಡೆ ಬಿಚ್ಚಿಸಿ ತೋರಿಸುತ್ತಾರೆ. ಆದರೆ ಕಾಳಿಂಗ ಸರ್ಪ ಹಿಡಿಯಲು ಸಲಕರಣೆಗಳ ಕೊರತೆಯಿಂದ ಹಿಡಿಯುವುದು ಕಷ್ಟಕರವಾಗಿದೆ. ಆದರೂ ಹರಸಾಹಸ ಪಟ್ಟು ಹಿಡಿಯುತ್ತಾರೆ. ಬರೀ ಹಾವು ಮಾತ್ರವಲ್ಲದೇ ಅಪಘಾತದ ಸಂದರ್ಭದಲ್ಲಿಯೂ ಘಾಟ್ ಪ್ರದೇಶದಲ್ಲಿ ಅನಾಥ ಶವಗಳನ್ನು ಎತ್ತುವುದರಲ್ಲೂ ಭಯ ಪಡದೇ ನಿಸ್ಸೀಮತೆ ತೋರುತ್ತಾರೆ. ಪೋಲಿಸರು ಕೂಡ ಆರೀಪ್ ಸಹಾಯ ಬೇಕಾದಾಗ ಕರೆ ಮಾಡಿ ಕರೆಸುತ್ತಾರೆ.