ಹಾಸನ: ನಗರದ ಸಂತೆಪೇಟೆ, ಗೊರೂರು ರಸ್ತೆ ಕಸದ ರಾಶಿ ಬಳಿ ಹಾಕಲಾಗಿದ್ದ ಹುಲ್ಲಿನ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಪಕ್ಕದಲ್ಲಿದ್ದ ಅಫೆ ವಾಹನವೂ ಸುಟ್ಟುಕರಕಲಾದ ಘಟನೆ ಶನಿವಾರ ನಡೆದಿದೆ.
ವ್ಯಾಪಾರಕ್ಕೆಂದು ತರಲಾಗಿದ್ದ ಹುಲ್ಲನ್ನು ವಿದ್ಯುತ್ ಟ್ರಾನ್ಸ್ಫಾರಂ ಬಳಿ ಇಡಲಾಗಿತ್ತು. ಗಾಳಿಗೆ ಬಳಿಯೇ ಇದ್ದ ಮರಕ್ಕೆ ವಿದ್ಯುತ್ ತಂತಿ ತಗುಲಿದೆ ಪರಿಣಾಮ ಬೆಂಕಿ ಕಿಡಿ ಹುಲ್ಲಿನ ಮೆದೆ ಮೇಲೆ ಬಿದ್ದಿದೆ. ಪರಿಣಾಮ ಹುಲ್ಲಿನ ರಾಶಿ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿದ್ದ ಅಫೆ ವಾಹನಕ್ಕೂ ತಗುಲಿ ಹೊತ್ತಿ ಉರಿದಿದೆ.
ದಟ್ಟಹೊಗೆಯೊಂದಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನದ ಮೂಲಕ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಲಾಯಿತಾದರೂ ಅಷ್ಟರಲ್ಲೇ ವಾಹನ ಸೇರಿ ಹುಲ್ಲು ಸುಟ್ಟು ಹೋಗಿತ್ತು. ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.