ಮಡಿಕೇರಿ: ಅಂಗನವಾಡಿ ನೌಕರರ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಏ.10 ರಂದು ವಿಶೇಷ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಆದರೆ ಭರವಸೆಯಂತೆ ಸರಕಾರ ನಡೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳ ನಿವಾಸದೆದುರು ಪ್ರತಿಭಟನೆ ನಡೆಸುವುದಾಗಿ ಸಿಐಟಿಯು ಅಂಗನವಾಡಿ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ, ಕಳೆದ 42 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅಂಗನವಾಡಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಇದರಿಂದ ಇಲಾಖೆ ಅಭಿವೃದ್ಧಿ ಹೊಂದಿದೆಯೇ ಹೊರತು ನೌಕರರು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಮಾಸಿಕ ಕೇವಲ 125 (ಎಸ್ಎಸ್ಎಲ್ಸಿ ಉತ್ತೀರ್ಣರಾದವರಿಗೆ 175 ರೂ.) ರೂ. ವೇತನದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೆ ಸೇವೆ ಆರಂಭಿಸಿದ ನೌಕರರು ನಡೆಸಿದ ಸಂಘಟಿತ ಹೋರಾಟದ ಫಲವಾಗಿ ಸರಕಾರ ಹಂತಹಂತವಾಗಿ ವೇತನ ಹೆಚ್ಚಿಸುತ್ತಾ ಬಂದಿದೆ. ಈ ಹೋರಾಟ ಅರ್ಧ ಶತಮಾನ ತಲುಪುತ್ತಿದ್ದರೂ ಅಂಗನವಾಡಿ ಕಾರ್ಯಕರ್ತೆಯರಿಗೆ 6000 ಹಾಗೂ ಸಹಾಯಕಿಯರಿಗೆ 3000ಸಾವಿರ ರೂ. ಸಿಗುತ್ತಿದೆ. ಈ ವೇತವನದಲ್ಲಿ ಅವರು ಜೀವನ ಸಾಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಕನಿಷ್ಟ ವೇತನ ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜ.30ರಿಂದ ಮೂರು ದಿನದ ಹೋರಾಟ ನಡೆಸಿದ ಸಂದರ್ಭ ಸರಕಾರ ಮಾರ್ಚ್ ತಿಂಗಳ ಬಜೆಟ್ ನಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಬಜೆಟ್ ನಲ್ಲಿ ಕಾರ್ಯಕರ್ತೆಯರಿಗೆ 1000 ಹಾಗೂ ಸಹಾಯಕಿಯರಿಗೆ 500 ರೂ. ಹೆಚ್ಚಿಸುವ ಮೂಲಕ ಹೋರಾಟಗಾರರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಕಾವೇರಮ್ಮ ಟೀಕಿಸಿದರು.
ಮಾ.20ರಿಂದ ನಡೆದ ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡುವ ಬದಲು ಕೆಲವು ಸಂಘಟನೆಗಳು ಹಾದಿ ತಪ್ಪಿಸುವ ಹೇಳಿಕೆಗಳನ್ನು ನೀಡಿ ಅಂಗನವಾಡಿ ನೌಕರರಲ್ಲಿ ಗೊಂದಲ ಮೂಡಿಸಿವೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಮಾತನಾಡಿ, ಸಿಐಟಿಯು ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಸರಕಾರ ಸೂಕ್ತ ಸ್ಪಂದನೆ ನೀಡಿದ್ದು, ಏ.10ರಂದು ಬೇಡಿಕೆ ಈಡೇರದಿದ್ದಲ್ಲಿ ಹೋರಾಟವನ್ನು ಮತ್ತೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿ.ಎಸ್. ಸುಮಿತ್ರಾ, ಖಜಾಂಚಿ ಎಂ.ವಿ.ಭಾಗೀರಥಿ, ಉಪಾಧ್ಯಕ್ಷೆ ಎಂ.ಬಿ.ಜಮುನಾ, ಹಾಗೂ ವೀರಾಜಪೇಟೆ ತಾಲೂಕು ಕ್ಷೇಮ ನಿಧಿ ಅಧ್ಯಕ್ಷೆ ಬಿ.ಕೆ.ಸರೋಜಾ, ಉಪಸ್ಥಿತರಿದ್ದರು.