ಮಾಗಡಿ: ಯುಗಾದಿಯ ಮಾರನೆಯ ದಿನದಿಂದ ಆರಂಭವಾಗುವ ಮಾಗಡಿ ಶ್ರೀರಂಗನಾಥಸ್ವಾಮಿ ದನಗಳ ಜಾತ್ರೆಗೆ ಸಿದ್ಧತೆ ಆರಂಭಗೊಂಡಿದೆ. ಬರದ ನಡುವೆಯೂ ಜಾತ್ರೆ ನಡೆಯುತ್ತಿದ್ದು, ತಾಲೂಕು ಆಡಳಿತ ಸಕಲ ಸಿದ್ಧತೆಯನ್ನು ಮಾಡಿದೆ.
ಮಾಗಡಿಯಲ್ಲಿ ನಡೆಯುವ ದನಗಳ ಜಾತ್ರೆಗೆ ತನ್ನದೇ ಆದ ಇತಿಹಾಸವಿದ್ದು, ದಕ್ಷಿಣ ಭಾರತದಲ್ಲಿ ನಡೆಯುವ ಜಾತ್ರೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆಯಲ್ಲದೆ ಬೃಹತ್ ದನಗಳ ಜಾತ್ರೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಯುಗಾದಿಯ ಮಾರನೆಯ ದಿನದಿಂದ ಆರಂಭಗೊಂಡು ಒಂದುವಾರ ಕಾಲ ನಡೆಯುವ ಜಾತ್ರೆಯಲ್ಲಿ ಜಾನುವಾರುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಯಿಂದಲ್ಲದೆ, ದೂರದ ಬಳ್ಳಾರಿ, ಗದಗ, ಚಿತ್ರದುರ್ಗ, ಶಿರ, ಹುಲಿಯೂರು ದುರ್ಗ, ಶಿವಮೊಗ್ಗ, ರಾಯಚೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ದನಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆಯಲ್ಲದೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಿಂದಲೂ ಬರುವುದು ಈ ಜಾತ್ರೆಯ ಮತ್ತೊಂದು ವಿಶೇಷವಾಗಿದೆ.
ಜಾತ್ರೆಯಲ್ಲಿ ಪಾಲ್ಗೊಳ್ಳುವ ದನಗಳ ಮಾಲಿಕರು ಮೊದಲೇ ಜಾಗವನ್ನು ಕಾದಿರಿಸಬೇಕಾಗುತ್ತದೆ. ಜಾತ್ರೆಯಂದು ಅದೇ ಜಾಗದಲ್ಲಿ ದನಗಳನ್ನು ಕಟ್ಟಿಹಾಕಬೇಕಾಗುತ್ತದೆ. ದನಗಳಿಗೆ ನೆರಳು ಒದಗಿಸುವ ಸಲುವಾಗಿ ಬೃಹತ್ ಶಾಮಿಯಾನ ಹಾಕಲಾಗಿದ್ದು, ಮೇವು, ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಡಿಯವ ನೀರು, ವಿದ್ಯುತ್ ವ್ಯವಸ್ಥೆಯಲ್ಲದೆ ರಾಸುಗಳಿಗೆ ತೊಂದರೆ ಆದರೆ ಪಶು ಇಲಾಖೆ ಸೂಕ್ತ ಚಿಕಿತ್ಸೆ ನೀಡಲಿದೆ. ಬರಗಾಲದ ಕಾರಣದಿಂದ ದನಗಳ ಜಾತ್ರೆಗೆ ಸುಂಕದಿಂದ ರಿಯಾಯಿತಿ ನೀಡಲಾಗಿದೆ. ಈಗಾಗಲೇ ಬಹಳಷ್ಟು ಕಡೆ ಬರದ ಕಾರಣ ದನಗಳ ಜಾತ್ರೆ ನಡೆದಿಲ್ಲ. ಮತ್ತೆ ಕೆಲವೆಡೆ ದನಜಾತ್ರೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ರಾಸುಗಳು ಬಂದಿಲ್ಲ. ಇದೆಲ್ಲದರ ನಡುವೆ ಮಾಗಡಿಯ ದನಜಾತ್ರೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ.