ಗುಂಡ್ಲುಪೇಟೆ: ಪಟ್ಟಣದಲ್ಲಿ ಮತಯಾಚನೆ ಮಾಡುವ ವೇಳೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತದಾರರಿಗೆ ಹಣ ಹಂಚಿಕೆ ಮಾಡುವುದರೊಂದಿಗೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಗೀತಾಮಹದೇವಪ್ರಸಾದ್ ಪರವಾಗಿ ಪ್ರಚಾರ ಮಾಡುವಾಗ ಖಾದರ್ ಮತ್ತು ಅವರ ಕಾರಿನ ಚಾಲಕ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ದೃಶ್ಯ ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಲ್.ಸುರೇಶ್ ಮತ್ತು ನಾನು ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಮತಯಾಚನೆ ಮಾಡುವಾಗ ಅವರ ಚಾಲಕ ಮತ್ತು ಖಾದರ್ ವ್ಯಕ್ತಿಯೋರ್ವರಿಗೆ ಹಣ ನೀಡಿರುವುದು ದೃಶ್ಯ ಮಾಧ್ಯಮದ ವರದಿಯಲ್ಲಿ ದಾಖಲಾಗಿರುತ್ತದೆ. ಇದರ ಆಧಾರದ ಮೇಲೆ ಸಾರ್ವಜನಿಕವಾಗಿ ಮತದಾರರಿಗೆ ಹಣದ ಆಮಿಷ ತೋರಿಸಿರುವುದು ಮತ್ತು ಹಣ ಪಡೆದು ಮತ ನೀಡುವಂತೆ ಪ್ರಚೋದಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ.
ಆದ್ದರಿಂದ ಗುಂಡ್ಲುಪೇಟೆ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯ ಉಸ್ತುವಾರಿ ಹೊತ್ತಿರುವ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 171, ಇ, ಎಫ್, ಮತ್ತು ಎಚ್ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ. ಇದರೊಂದಿಗೆ ಕ್ಷೇತ್ರದ 250 ಬೂತ್ ಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವುದರೊಂದಿಗೆ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸುವುದಾಗಿ ಹೇಳಿದ್ದಾರೆ.