ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಶ್ರೀ ಕಾಲಬೈರವೇಶ್ವರ ದೇವಾಲಯದಲ್ಲಿ ನಡೆದ ಕೊಂಡೋತ್ಸವದ ವೇಳೆ ಪೂಜಾರಿಯೊಬ್ಬ ಕಾಲಿಗೆ ಪಂಚೆ ಸಿಕ್ಕಿ ಕೊಂಡಕ್ಕೆ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಗ್ರಾಮಸ್ಥರು ತೋರಿದ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸರಾಳು ಗ್ರಾಮದ ಕುಮಾರ (38) ಕೊಂಡಕ್ಕೆ ಬಿದ್ದು ಪ್ರಾಣಾಪಾಯದಿಂದ ಪಾರಾದವರು. ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಸೋಮವಾರ ದೇವರ ಕೊಂಡೋತ್ಸವ ಏರ್ಪಡಿಸಲಾಗಿತ್ತು. ಸುಮಾರು 28 ಗ್ರಾಮಗಳು ಸೇರಿ ಆಚರಿಸುವ ಕೊಂಡೋತ್ಸವದಲ್ಲಿ ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಸೌದೆಗಳನ್ನು ಕೊಂಡಕ್ಕೆ ತಂದು ಹಾಕಿದ್ದರು.
ಬಳಿಕ ಸಂಪ್ರದಾಯದಂತೆ ಸವಿತಾ ಸಮಾಜದ ಮೂಕ ವ್ಯಕ್ತಿ ಕೊಂಡದಲ್ಲಿ ಕಲ್ಲುಗಳನ್ನಿಟ್ಟು ಹುಲ್ಲಿನಿಂದ ಸೌದೆಗೆ ಬೆಂಕಿ ಹಚ್ಚಿದ ಬಳಿಕ ಗ್ರಾಮಸ್ಥರು ಅಗ್ನಿಕುಂಡದಲ್ಲಿ ಕೆಂಡವನ್ನು ತಯಾರು ಮಾಡಿದ್ದರು.
ಸೋಮವಾರ ಮುಂಜಾನೆ 4 ಗಂಟೆಗೆ ಮತ್ತೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ಆರಂಭವಾಗಿತ್ತು. ಬಸರಾಳು ಸೇರಿದಂತೆ ಸುತ್ತಮುತ್ತಲ ಏಳು ಗ್ರಾಮಗಳಿಂದ ದೇವರ ಗುಡ್ಡಪ್ಪ ದೇವರನ್ನು ಹೊತ್ತುಕೊಂಡು ಕೊಂಡ ಹಾಯುವುದು ಪದ್ಧತಿಯಾಗಿರುವುದರಿಂದ ಎಲ್ಲ ಗ್ರಾಮದ ದೇವರ ಗುಡ್ಡಪ್ಪರವರು ಬೆಳಗ್ಗೆ 6.30ಕ್ಕೆ ಕೊಂಡದ ಬಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಒಬ್ಬೊಬ್ಬರಂತೆ ಕೊಂಡ ಹಾಯುವ ಕಾರ್ಯ ನಡೆಸಿದರು. ಏಳು ಮಂದಿ ಪೂಜಾರಿಗಳ ಪೈಕಿ ಆರು ಮಂದಿ ಕೊಂಡ ಹಾಯುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಬಸರಾಳು ಗ್ರಾಮದ ರಮೇಶ ಎಂಬುವರು ಕೊಂಡ ಹಾಯುತ್ತಿದ್ದಾಗ ಕೊನೆಯ ಹಂತದಲ್ಲಿ ಬಂದ ವೇಳೆ ಕಾಲಿಗೆ ಪಂಚೆ ತಗುಲಿ ಎಡವಿ ಬಿದ್ದರು. ಈ ವೇಳೆ ಅಕ್ಕ ಪಕ್ಕದಲ್ಲಿ ನಿಂತಿದ್ದ ಗ್ರಾಮಸ್ಥರು ಅವರನ್ನು ತಕ್ಷಣ ಕೊಂಡದಿಂದ ಮೇಲೆಳೆದು ರಕ್ಷಿಸಿದ್ದಾರೆ.
ಪರಿಣಾಮ ಯಾವುದೇ ಗಂಭೀರ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾದರು. ಬಳಿಕ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಪಡೆದ ಬಳಿಕ ಮತ್ತೆ ದೇವಸ್ಥಾನದ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 17 ವರ್ಷಗಳಿಂದ ಕೊಂಡ ಹಾಯುತ್ತಿದ್ದ ಕುಮಾರ ಅವರಿಗೆ ಇದೇ ಮೊದಲ ಬಾರಿಗೆ ಈ ರೀತಿಯಾಗಿದ್ದು, ಕಾಲಿಗೆ ಪಂಚೆ ಸಿಕ್ಕಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಂತು ಯಾವುದೇ ಪ್ರಾಣಾಪಾಯ ಸಂಭವಿಸದಕ್ಕೆ ದೇವರ ದಯೆಯೇ ಕಾರಣ ಎಂದು ಗ್ರಾಮಸ್ಥರು ಹೇಳಿದ್ದಾರೆ.