ಹಾಸನ: ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಸುತ್ತಿದ್ದ ಯೋಧರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಹೇಗೆ ಮೃತಪಟ್ಟಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ.
ಹೊಳೆನರಸೀಪುರ ತಾಲೂಕಿನ ಗೊಂದಿಮಲ್ಲೇನಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಮತ್ತು ತಂಗಮ್ಮ ದಂಪತಿ ಪುತ್ರ ಯೋಧ ಜಿ.ಎಸ್. ಪ್ರಸನ್ನಕುಮಾರ (28) ಮೃತಪಟ್ಟ ದುರ್ದೈವಿ. ಇವರು ಸೋಮವಾರ ಬೆಳಿಗ್ಗೆ ಪಂಜಾಬ್ ನ ಪೆರೋಜ್ಪುರದಲ್ಲಿ ಮೃತಪಟ್ಟಿದ್ದಾರೆಂದು ಗಡಿಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಯೋಧನ ಸಹೋದರ ಜಿ.ಎಸ್.ಲೋಕೇಶ್ ಹೇಳುವಂತೆ ಯೋಧ ಪ್ರಸನ್ನಕುಮಾರ್ ಸಾವನಪ್ಪಿರುವ ವಿಷಯವನ್ನು ಬಿಎಸ್ಎಫ್ ನ ಅಧಿಕಾರಿಗಳು ಮೃತನ ಮನೆಗೆ ದೂರವಾಣಿ ಮೂಲಕ ಸೋಮವಾರ ಬೆಳಿಗ್ಗೆ 7.30ರಲ್ಲಿ ತಿಳಿಸಿ ಶವದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದಷ್ಟೆ ಮಾಹಿತಿ ನೀಡಿದ್ದು, ಸಾವಿಗೆ ನಿಖರ ಕಾರಣವೇನೆಂದು ತಿಳಿಸಲಿಲ್ಲ ಎಂದಿದ್ದಾರೆ.
ಯೋಧನ ಸಾವಿನ ಸುದ್ದಿ ತಿಳಿಯುತ್ತಿದಂತೆ ಕುಟುಂಬದವರ ದುಃಖದ ಕಟ್ಟೆಯೊಡೆದಿದ್ದು ರೋಧನ ಮುಗಿಲು ಮುಟ್ಟಿದೆ. ಸುತ್ತಮುತ್ತಲಿನವರು ಯೋಧನ ಮನೆ ಸುತ್ತ ನೆರೆದಿದ್ದಾರೆ.
ಮೂವರು ಪುತ್ರರಲ್ಲಿ ಮೃತಯೋಧ ಪ್ರಸನ್ನ ಕುಮಾರ ಹಿರಿಯವನಾಗಿದ್ದಾನೆ. ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದು, 2010ರಲ್ಲಿ ಗಡಿಭದ್ರತಾ ಪಡೆಗೆ ಸೇರ್ಪಡೆಗೊಂಡಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು. ಕೆಲ ಸಮಯಗಳಿಂದ ಪಂಜಾಬ್ ನ ಪೆರೋಜ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಸಂಬಂಧ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರನ್ನು ಸಂಪರ್ಕಿಸಿದ ಮಾಧ್ಯಮದವರಿಗೆ ಯೋಧನ ಬಗ್ಗೆ ತಾಲೂಕು ಆಡಳಿತಕ್ಕೆ ಸ್ಪಷ್ಟ ಮಾಹಿತಿ ಸಿಕಿಲ್ಲ. ಈ ಬಗ್ಗೆ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.
ಮೃತಯೋಧನ ಸಹೋದರನಿಂದ ತಿಳಿದು ಗೊಂದಿಮಲ್ಲೇನಹಳ್ಳಿ ಗ್ರಾಮದಲ್ಲಿರುವ ಅವರ ಮನೆಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆದುಕೊಳ್ಳುತ್ತಿದ್ದು ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಬಂದನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.