ಕೊಳ್ಳೇಗಾಲ: ಎಲ್ಲೆಡೆ ಜನರು ಹಬ್ಬದ ಸಂಭ್ರಮದಲ್ಲಿದ್ದರೆ ಮಾರ್ಟಳ್ಳಿ ಗ್ರಾಮದ ಮಹಿಳೆಯರು ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ನೀರನ್ನು ಪೂರೈಸುವಂತೆ ಆಗ್ರಹಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ. ತಾಲೂಕಿನ ಮಾರ್ಟಳ್ಳಿ ಗ್ರಾ.ಪಂನ ಸಂದನಪಾಳ್ಯ, ಲೂರ್ದನಗರ, ಅಣೈತೇರೆಸಾನಗರ ಗ್ರಾಮಸ್ಥರು ಖಾಲಿಕೊಡವನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಟಳ್ಳಿ ಗ್ರಾ.ಪಂನ ಸಂದನಪಾಳ್ಯದಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿಲ್ಲದಿದ್ದರೂ ಸಹ ಪಂಚಾಯಿತಿ ವ್ಯಾಪ್ತಿಯ ನೀರು ಇರುವ ಗ್ರಾಮಗಳಿಗೆ ಬೋರ್ ತೆಗೆಸುತ್ತಿರುವ ಅಧಿಕಾರಿಗಳು ಸಂದನಪಾಳ್ಯ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಾಲ್ಕು ಬೋರ್ ಗಳು ಕೆಟ್ಟೂ ನಿಂತಿದ್ದು ಅದನ್ನು ಸರಿಪಡಿಸಿ ನಮಗೆ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ನಮಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಬೇಕು ಜೊತೆಗೆ ಹೊಸ ಬೋರ್ ಕೊರೆಸುವಂತೆ ಆಗ್ರಹಿಸಿದರು.
ಮಾರ್ಟಳ್ಳಿ ಜೆಇ ಮಣಿ ಅವರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಹೊಸ ಬೋರ್ ಅನ್ನು ಕೊರೆಯಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಗಿದೆ.