ಗುಂಡ್ಲುಪೇಟೆ: ಬರಗಾಲವನ್ನು ಎದುರಿಸುವ ತಾಕತ್ತಿಲ್ಲದ ಸರ್ಕಾರದ ಮಂತ್ರಿಗಳು ಹಣ ಬಲ ತೋಳ್ಬಲದಿಂದ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈಡಿಗ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ನ್ಯಾಯಕ್ಕೆ ಮತ್ತು ಸ್ವಾಭಿಮಾನಕ್ಕೆ ಜಯಸಿಗಲಿದ್ದು ಎಲ್ಲ್ಲ ವರ್ಗದ ಜನರ ಆಶೀರ್ವಾದದಿಂದ ಭಾರತೀಯ ಜನತಾಪಾರ್ಟಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು. ಉಸ್ತುವಾರಿ ಸಚಿವ ಖಾದರ್ ಕಾಂಗ್ರೆಸ್ ನಲ್ಲಿ ರಾತ್ರಿ ಬ್ಯಾಟ್ಸ್ ಮನ್ ಗಳು ಇದ್ದಾರೆ ನಾವೇ ಗೆಲ್ಲೋದು ಎನ್ನುತ್ತಾರೆ. ಆದರೆ ನಾವು ಯಾವಾಗಲೂ ಬೆಳಗಿನ ಆಟಗಾರರು ನಮಗೆ ಸೋಲು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಚುನಾವಣೆಗಳು ಎಲ್ಲರನ್ನೂ ಒಗ್ಗೂಡಿಸಬೇಕು ಜಾತಿ ಜಾತಿಗಳನ್ನು ಒಡೆಯುವ ಚುನಾವಣೆಗಳಾಗಬಾರದು ಸಭ್ಯತೆಯ ಮತಯಾಚನೆಗೆ ಮುಂದಾಗಬೇಕು ಆಗ ನಮ್ಮನ್ನು ಯುವಕರು ಆಳುತ್ತಾರೆ. ರಾಜ್ಯ ಮತ್ತು ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾಜ ಕಲ್ಯಾಣ ಇಲಾಖೆಯ ಅನೇಕ ಹಾಸ್ಟೆಲ್ ಗಳಲ್ಲಿ ಸರಿಯಾದ ಆಹಾರ ವಿತರಣೆಯಾಗುತ್ತಿಲ್ಲ, ಮಕ್ಕಳಿಗೆ ಮಲಗಲು ಸೂಕ್ತ ಹಾಸಿಗೆ ಇಲ್ಲ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಆ ಇಲಾಖೆಯಿಂದ ಸನ್ಮಾನ ಮಾಡುತ್ತಿರುವುದು ಎಷ್ಟು ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಾನು ತಂದೆಗೆ ತಕ್ಕ ಮಗನಾಗಿದ್ದು ತಂದೆ ಹಾಕಿಕೊಟ್ಟ ಉತ್ತಮ ದಾರಿಯಲ್ಲಿ ಸಾಗುತ್ತಿದ್ದೇನೆ ತಂದೆಯ ಹೆಸರಿಗೆ ಕಳಂಕಬಾರದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.