ಹುಣಸೂರು: ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ಯುಗಾದಿ ಸಂಭ್ರಮ ಮತ್ತು ಗ್ರಾಮದೇವತೆ ಶ್ರೀ ಮಲ್ಲಿಕಾನ ಸ್ವಾಮಿ ಪೂಜಾ ಮಹೋತ್ಸವಕ್ಕೆ ತೆರೆ ಬಿದ್ದಂತಾಗಿದೆ.
ಹಬ್ಬದ ಮೊದಲ ದಿನ ಮಂಗಳವಾರ ಶ್ರೀ ಮಲ್ಲಿಕಾರ್ಜುನ ಉತ್ಸವ ಮೂರ್ತಿಯನ್ನು ಪಕ್ಕದ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆವರೆಗೆ ಗ್ರಾಮದ ಪ್ರತಿ ಕುಟುಂಬದಿಂದ ಕನಿಷ್ಟ ಒಬ್ಬರಂತೆ ಬರಿಗಾಲಲ್ಲಿ ಬುತ್ತಿಯೊಂದಿಗೆ ತೆರಳಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಮಡಿಯುಟ್ಟು ಜತೆಗೆ ತೆಗೆದುಕೊಂಡು ಹೋಗಿದ್ದ ಶ್ರೀ ಮಲ್ಲಿಕಾರ್ಜುನ ಉತ್ಸವ ಮೂರ್ತಿಗೆ ಸ್ನಾನ ಮಾಡಿಸಿ ಅಲ್ಲಿಂದ ಮಡಿಬಟ್ಟೆ ತೊಟ್ಟು ಬೇವು ಬೆಲ್ಲ ಸೇವಿಸಿ ಬಳಿಕ ಮನೆಯಿಂದ ತಂದ ಬುತ್ತಿಯನ್ನು ಸಾಮೂಹಿಕವಾಗಿ ಸೇವಿಸಿ ಬಳಿಕ ಗ್ರಾಮಕ್ಕೆ ಹಿಂತಿರುಗಲಾಯಿತು. ಈ ವೇಳೆ ದಾರಿಯುದ್ದಕ್ಕೂ ಗ್ರಾಮಸ್ಥರು ಪಾನಕ, ಮಜ್ಜಿಗೆ ನೀಡಿದ್ದರು. ಬಳಿಕ ತಮ್ಮ ಹಿರಿಕ್ಯಾತನಹಳ್ಳಿ ಗ್ರಾಮಕ್ಕೆ ಬಂದು ಅಲ್ಲಿ ಉತ್ಸವ ಮೂರ್ತಿಗೆ ಪೂಜಾಕೈಂಕರ್ಯ ನಡೆಸಲಾಯಿತು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಮಕ್ಕಳು ಹೊಸ ಉಡುಗೆಗಳನ್ನು ತೊಟ್ಟು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ 3 ಗಂಟೆಗೆ ದೇವಸ್ಥಾನದ ಬಳಿ ಮತ್ತೆ ಗ್ರಾಮದ ಹಿರಿಯರು ಹಾಗೂ ಊರ ಜನರು ಸೇರಿ ಸಂಪ್ರದಾಯದಂತೆ ಪುರೋಹಿತರನ್ನು ಕರೆಸಿ ಹೊಸ ಪಂಚಾಂಗದಂತೆ ಯಾರ ಹೆಸರಿನಲ್ಲಿ ಹಾಗೂ ಯಾವ ಬಣ್ಣದ ಎತ್ತುಗಳಿಂದ ಉಳುಮೆ ಮಾಡಬೇಕೆಂಬುದನ್ನು ನಿರ್ಧರಿಸಿ ಆಯ್ಕೆ ಮಾಡಿ ರೈತನ ತಲೆಗೆ ಟವಲಿನಿಂದ ಪೇಟ ಬಿಳಿ ಪಂಚೆ ಶರ್ಟ್ ತೊಟ್ಟು ಉಳುವ ಎತ್ತುಗಳನ್ನು ಏರುಕಟ್ಟಿ ತಮಟೆ ವಾದ್ಯಗಳೊಂದಿಗೆ ಇಡೀ ಊರು ಸುತ್ತಿ ಉಳುಮೆ ಮಾಡಿದ ನಂತರ ದೇವಸ್ಥಾನ ತಲುಪಿದರು. ರಾತ್ರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವರ ಉತ್ಸವ ನಡೆದು ಗುರುವಾರ ಮುಂಜಾನೆ ಕೊಂಡೋತ್ಸವ ಮತ್ತು ಪೂಜಾಕೈಂಕರ್ಯ ನಡೆಯುವುದರೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.