ಹಾಸನ: ತಾಲೂಕಿನ ದೊಡ್ಡಕೊಂಡಗುಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಅಂಗವಾಗಿ ಬುಧವಾರ ಸಂಜೆ ಬೆಂಕಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಊರಿನ ಜನರು ದೇವರ ಅಡ್ಡೆ ಹೊತ್ತು ಊರಿನೊಳಗೆ ಮೆರವಣಿಗೆ ನಡೆಲಾಯಿತು.
ಮದುವೆಯಾದ ನವ ಜೋಡಿಗಳು ಹಬ್ಬದ ಸಂದರ್ಭ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇನ್ನು ಏನಾದರೂ ಹರಕೆ ಕಟ್ಟಿಕೊಂಡು ತೆಂಗಿನ ಕಾಯಿಯನ್ನು ಸ್ಪರ್ಶಿಸಿದರೆ ಆ ಸ್ಥಳಕ್ಕೆ ದೇವರ ಅಡ್ಡೆ ನೂಕಿಕೊಂಡು ಸ್ಥಳಕ್ಕೆ ಬರುತ್ತದೆ ಎಂಬ ನಂಬಿಕೆಯಿದೆ.
ಮದುವೆಯಾದ ಬಳಿಕ ಮಕ್ಕಳಾಗದ ದಂಪತಿಗಳು ತಾಯಿಗೆ ಅಕ್ಕಿ, ಬಟ್ಟೆ ನೀಡುವುದಾಗಿ ಹರಕೆ ಕಟ್ಟಿಕೊಂಡರೆ ಬೆಂಕಿಯಮ್ಮ ಅದನ್ನು ನೆರವೇರಿಸುತ್ತಾರೆ ಎಂಬ ನಂಬಿಕೆಯಿದ್ದು ಅದರಂತೆ ಪ್ರತಿವರ್ಷ ಜನರು ಹರಕೆ ಕಟ್ಟಿಕೊಳ್ಳುತ್ತಾರಲ್ಲದೆ, ಈಡೇರಿದರೆ ಬಂದು ತೀರಿಸುತ್ತಾರೆ.
ಇತರೆ ದಿನಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಯುಗಾದಿ ಹಬ್ಬದ ಸಂದರ್ಭ ನಡೆಯುವ ಜಾತ್ರೆಗೆ ಹೆಚ್ಚಿನ ಮಹತ್ವವಿದೆ.