ಗುಂಡ್ಲುಪೇಟೆ: ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
ಸಚಿವ ಯು.ಟಿ. ಖಾದರ್ ಅವರು ಮಾ. 27 ರಂದು ಗುಂಡ್ಲುಪೇಟೆ ಪಟ್ಟಣದ ಕಾಂಗ್ರೇಸ್ ಕಚೇರಿ ಬಳಿ ಮತಯಾಚನೆ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಹಣದ ಆಮಿಷವೊಡ್ಡಿದ್ದಾರೆ ಹಾಗೂ ಅವರ ಕಾರು ಚಾಲಕ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಗುಂಡ್ಲುಪೇಟೆ ಟೌನ್ ನಿವಾಸಿ ಎಲ್. ಸುರೇಶ್ ದೂರು ಅರ್ಜಿ ಸಲ್ಲಿಸಿದ್ದರು.
ಮತದಾರರಿಗೆ ಹಣದ ಆಮಿಷ ನೀಡಿ ಪ್ರಚೋದಿಸಿರುವುದರಿಂದ ಆರೋಪವು ಅಸಂಜ್ಞೆಯ ಅಪರಾಧವಾದ್ದರಿಂದ ಠಾಣಾ ಕಜಿಎಸ್ಸಿ ನಂಬರ್ 128/17 ರಂತೆ ಪ್ರಕರಣ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಮಾ.28 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಠಾಣಾ ಮೊ.ನಂ. 145/17 ಕಲಂ 171 (ಬಿ)(ಸಿ)(ಇ) ಮತ್ತು (ಎಫ್) ಐ.ಪಿ.ಸಿ. ಅಡಿ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ವಶ: ವಿಧಾನಸಭಾ ಉಪ ಚುನಾವಣಾ ಹಿನ್ನಲೆಯಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲೂಕು ಕಗ್ಗಳ ಗ್ರಾಮದ ಸಿದ್ದರಾಜು ಎಂಬುವರಿಂದ 1.080 ಮಿಲಿ ಲೀಟರ್, ಹುಲ್ಲೆಪುರ ಗ್ರಾಮದ ವೆಂಕಟಶೆಟ್ಟಿ ಎಂಬುವರಿಂದ 0.810 ಮಿಲಿ ಲೀಟರ್, ಚಾಮರಾಜನಗರ ತಾಲೂಕು ನಂಜದೇವನಪುರ ಗ್ರಾಮದ ಮಾದನಾಯ್ಕ ಎಂಬುವರಿಂದ 0.810 ಮಿಲಿ ಲೀಟರ್ ಉಡಿಗಾಲ ಗ್ರಾಮದ ಮಲ್ಲೇಶ್ ಎಂಬುವರಿಂದ 0.720 ಮಿಲಿ ಲೀಟರ್, ಕೊಳ್ಳೇಗಾಲ ತಾಲೂಕು ಸಿಂಗನಲ್ಲೂರು ಗ್ರಾಮದ ಕೆಂಚಶೆಟ್ಟಿ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.