ಹಾಸನ: ಮನೆಗೆ ಕನ್ನಹಾಕಿ ಚಿನ್ನಾಭರಣ ದೋಚಿ, ಮಹಿಳೆಯರ ಸರ ಎಗರಿಸಿ, ಬೈಕ್ ಕದಿಯುತ್ತಾ ನಗರದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಐದು ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಇದರಿಂದ ಸಾರ್ವಜನಿಕರು ನೆಮ್ಮದಿಯುಸಿರು ಬಿಡುವಂತಾಗಿದೆ.
ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 21,56,412 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ತಾಲೂಕಿನ ರಾಜಘಟ್ಟದ ನಿವಾಸಿ ಕೂಲಿ ಕಾರ್ಮಿಕ ವಿಜಯಕುಮಾರ್ (31), ತುಮಕೂರು ಜಿಲ್ಲೆಯ ತುರುವೆಕೆರೆ ವಿನೋಬ ನಗರದ ನಿವಾಸಿಗಳಾದ ಕೂಲಿ ಕಾರ್ಮಿಕ ವೆಂಕಟೇಶ್ (26) ಮರಗೆಲಸ ಮಾಡುತ್ತಿದ್ದ ಸಂತೋಷ್ (30), ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ಕೆ. ಹೊಸೂರು ಗ್ರಾಮದ ನಿವಾಸಿ ಮಂಜ(32) ಹಾಸನ ಸ್ಲಂಬೋರ್ಡ್ ನ ವಿಶ್ವನಾಥ ನಗರ ನಿವಾಸಿ ಟೈಲರ್ ಉದಯಕುಮಾರ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಎಲ್ಲೆಡೆ ಸುತ್ತಾಡಿ ಯಾರು ಇಲ್ಲದ ಸಂದರ್ಭ ನೋಡಿ ಮನೆಗಳಿಗೆ ಕನ್ನ ಹಾಕುವುದು, ಬೈಕ್ ಕಳ್ಳತನ ಮಾಡುತ್ತಿದ್ದರಲ್ಲದೆ, ಚಿನ್ನಾಭರಣ ಧರಿಸಿದ್ದ ಒಂಟಿ ಮಹಿಳೆಯರನ್ನು ಮೋಟಾರ್ ಬೈಕಿನಲ್ಲಿ ಹಿಂಬಾಲಿಸಿ ಅವರ ಮಾಂಗಲ್ಯ ಹಾಗೂ ಚಿನ್ನದ ಸರವನ್ನು ಎಗರಿಸಿ ನಾಪತ್ತೆಯಾಗಿ ಬಿಡುತ್ತಿದ್ದರು. ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದ ಈ ಘಟನೆಗಳಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಅಧಿಕ್ಷಕರು ವಿ.ಎಂ. ಜ್ಯೋತಿ ಮತ್ತು ಉಪವಿಭಾಗದ ಡಿವೈಎಸ್ಪಿ ಕೆ.ಬಿ. ಜಯರಾಂ ನೇತೃತ್ವದಲ್ಲಿ ನಗರ ವೃತ್ತ ಸಿಪಿಐ ವೈ. ಸತ್ಯನಾರಾಯಣ್ ಹಾಗೂ ಬಡಾವಣೆ ಪೊಲೀಸ್ ಪಿಎಸ್ಐ ಪ್ರಮೋದ್ ಕುಮಾರ್, ಸಿಬ್ಬಂದಿ ಸೇರಿದಂತೆ ಒಂದು ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ನಗರದ ರಿಂಗ್ ರಸ್ತೆ ಬಳಿ ಪೆಟ್ರೋಲ್ ಬಂಕ್ ಹತ್ತಿರ ಗೌರಿಕೊಪ್ಪಲು ಮಾರ್ಗವಾಗಿ ಹೋಗುತ್ತಿದ್ದ ಆರೋಪಿ ವಿಜಯಕುಮಾರ್ ಎಂಬಾತನನ್ನು ಅನುಮಾನದಡಿ ಹಿಡಿದು ವಿಚಾರಣೆ ನಡೆಸಿದಾಗ ಆತ ತನ್ನ ತಂಡದೊಂದಿಗೆ ಎಸಗುತ್ತಿದ್ದ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದನು. ಆತ ನೀಡಿದ ಸುಳಿವಿನಂತೆ ಇತರೆ ನಾಲ್ವರನ್ನು ಬಂಧಿಸಿ ಅವರಿಂದ 14,57,912 ರೂ ಮೌಲ್ಯದ 530 ಗ್ರಾಂ ತೂಕದ ಚಿನ್ನಾಭರಣಗಳು, 3,48,500 ರೂ ಮೌಲ್ಯದ 8.5. ಕೆ.ಜಿ. ಬೆಳ್ಳಿ ಆಭರಣಗಳು, 40 ಸಾವಿರ ರೂ ಮೌಲ್ಯದ ಒಂದು ಟಿವಿ, 80 ಸಾವಿರ ರೂ ಮೌಲ್ಯದ 3 ಲ್ಯಾಪ್ಟಾಪ್, 1 ಲಕ್ಷದ 20 ಸಾವಿರ ರೂ ಮೌಲ್ಯದ 3 ಮೋಟಾರ್ ಬೈಕುಗಳು ಸೇರಿ ಒಟ್ಟು 21,56,412 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟೈಲರ್ ಉದಯಕುಮಾರ್ ಎಂಬಾತನ ಬಳಿಯಿದ್ದ 1 ಲಕ್ಷದ 10 ಸಾವಿರ ರೂ. ಬೆಲೆ ಬಾಳುವ 6 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಎಸ್ಪಿ ರಾಹುಲ್ಕುಮಾರ್ ಅವರೊಂದಿಗೆ ನಗರ ವೃತ್ತ ನಿರೀಕ್ಷಕ ವೈ. ಸತ್ಯನಾರಾಯಣ್, ಪಿಎಸ್ಐ ಪ್ರಮೋದ್ ಕುಮಾರ್, ಸುರೇಶ್ ಇತರರು ಇದ್ದರು.