ಮಂಡ್ಯ: ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ, ಹಿರಿಯ ಪತ್ರಕರ್ತ ಪ್ರೊ. ಎಚ್.ಎಲ್.ಕೇಶವಮೂರ್ತಿ(78) ಅವರು ಗುರುವಾರ ರಾತ್ರಿ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಾಗಮಂಗಲ ತಾಲೂಕಿನ ಹೆರಗನಹಳ್ಳಿಯಲ್ಲಿ 1939ರಲ್ಲಿ ಜನಿಸಿದ ಕೇಶವಮೂರ್ತಿ ಅವರು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವೀಧರರಾಗಿ ಪಿಇಎಸ್ ತಾಂತ್ರಿಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ಮೇಲೆ ಹೆಚ್ಚಿನ ಒಲವನ್ನು ಬೆಳೆಸಿಕೊಂಡಿದ್ದರು. ಇವರು`ಎಂಗಾರ ಟಿಕೆಟ್ ಕೊಡಿ’ ಒಂದು ಪ್ರವಾಸ ಕೃತಿ. `ಇವರ ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂಬ ಲಲಿತ ಪ್ರಬಂಧಕ್ಕೆ 1972ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿತ್ತು.
ರಾಜಕೀಯ ವಿಡಂಬನೆ, ವೈಚಾರಿಕತೆಗೆ ಹೆಸರಾಗಿದ್ದ ಲೇಖಕರಾಗಿದ್ದ ಪ್ರೊ. ಎಚ್.ಎಲ್.ಕೇಶವಮೂರ್ತಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ಕಾವೇರಿ ವಿವಾದ ಕುರಿತು `ಏನಿದು ವಿವಾದ?’ ಕಿರು ಹೊತ್ತಿಗೆಯನ್ನು ಹೊರತಂದಿದ್ದರು. ಪ್ರಗತಿಪರ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ನಕಲಿ ಪ್ರಮಾಣಪತ್ರ ನೀಡಿ ಮಿಮ್ಸ್ನ ಬೋಧಕ ಹುದ್ದೆ ಪಡೆದಿದ್ದವರ ವಿರುದ್ಧ ಹೋರಾಟ ರೂಪಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಜಿಲ್ಲಾಧಿಕಾರಿಗಳ ಮೂಲಕ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು. ಕರ್ನಾಟಕ ಜನಶಕ್ತಿ ಸಂಘಟನೆಯ ಗೌರವಾಧ್ಯಕ್ಷರಾಗಿದ್ದ ಪ್ರೊ. ಎಚ್.ಎಲ್.ಕೇಶವಮೂರ್ತಿ ಅವರು ಕೆಲ ವರ್ಷ `ಉದಯಕಾಲ’ ಪತ್ರಿಕೆ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು.
ಪ್ರೊ.ಹೆಚ್.ಎಲ್.ಕೇಶವಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ನಗರದ ಮೈಷುಗರ್ ಪ್ರೌಢಶಾಲೆ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ.