ನಂಜನಗೂಡು: ಸಿಎಂ ಸಿದ್ದರಾಮಯ್ಯ ಇಂದು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ನಂಜನಗೂಡು ಹಾಗೂ ನಾಳೆ ಗುಂಡ್ಲುಪೇಟೆಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಎಲ್ಲಾ ಸಚಿವರು ಪ್ರಚಾರಕ್ಕೆ ಬರುತ್ತಿಲ್ಲ. ಕೆಲ ಸಚಿವರು ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ನಾನು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಿಲ್ಲ. ಉಪಚುನಾವಣೆಗಳು ಮುಂದಿನ ದಿಕ್ಸೂಚಿ ಆಗುವುದಿಲ್ಲ. ಆದರೆ ನಮ್ಮ ಅಭಿವೃದ್ಧಿ ಕುರಿತು ಜನರ ಅಭಿಪ್ರಾಯ ತಿಳಿದುಕೊಳ್ಳಬಹುದು. ಈ ಉಪಚುನಾವಣೆಯಲ್ಲಿ ಅದು ನಮಗೆ ತಿಳಿಯಲಿದೆ ಎಂದು ಹೇಳಿದರು.
ದಲಿತರನ್ನು ಸಿಎಂ ಸಿದ್ದರಾಮಯ್ಯ ಮುಗಿಸುತ್ತಿದ್ದಾರೆ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪ, ಪರಮೇಶ್ವರ್, ಆಂಜನೇಯ, ಮಲ್ಲಿಕಾರ್ಜುನ ಖರ್ಗೆ ದಲಿತರಲ್ಲವೇ ಅವರೆಲ್ಲಾ ದಲಿತ ನಾಯಕರಲ್ಲವೇ ಪ್ರಸಾದ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಮಾತು ಬರುವುದಿಲ್ಲ. ಜನ ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ ಎಂದು ಹೇಳಿದರು.