ಮಡಿಕೇರಿ: ಜೀವನದಿ ಕಾವೇರಿಯಲ್ಲಿ ದಿನಕಳೆದಂತೆ ಜಲಮೂಲಗಳು ಬತ್ತಿಹೋಗುತ್ತಿದ್ದು ನದಿ ತಟದ ಜನತೆ ಶುದ್ಧ ನೀರಿಗಾಗಿ ಪರಿತಪಿಸುತ್ತಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಕಾವೇರಿ ನದಿ ತಟಗಳಲ್ಲಿ ಮುಂದಿನ 2 ತಿಂಗಳ ಕಾಲ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಕಾವೇರಿ ನದಿ ಸ್ವಚ್ಛ್ಚತಾ ಆಂದೋಲನ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.
ಮಡಿಕೇರಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕ್ಷೀಣಿಸಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದ್ದು ಜಲಮೂಲಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಕ್ಷಣ ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗಧಾಮ, ಕಣಿವೆ ಸೇರಿದಂತೆ ನದಿ ತಟದ ಪುಣ್ಯಕ್ಷೇತ್ರಗಳಲ್ಲಿ ಪ್ರವಾಸಿಗರಿಂದ, ಭಕ್ತಾದಿಗಳಿಂದ ನದಿ ನೀರು ಕಲುಷಿತಗೊಳ್ಳದಂತೆ ಸ್ಥಳೀಯ ಆಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ. ಮುಂದಿನ 2 ತಿಂಗಳ ಕಾಲ ಕಾವೇರಿ ನದಿ ತಟಗಳಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್, ಬೋಟಿಂಗ್ ಮತ್ತಿತರ ಪ್ರವಾಸಿಗರ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ನದಿ ನೀರಿನ ಸಂರಕ್ಷಣೆ ಮಾಡುವುದರೊಂದಿಗೆ ಮಾಲಿನ್ಯ ತಪ್ಪಿಸಿ ನದಿ ತಟದ ಗ್ರಾಮ, ಪಟ್ಟಣಗಳ ಜನತೆಗೆ ಶುದ್ಧ ಕುಡಿವ ನೀರು ಒದಗಿಸಲು ಸಾಧ್ಯವಾಗಲಿದೆ. ಬಿರು ಬೇಸಿಗೆಯ ನಡುವೆ ಜನಜಾನುವಾರುಗಳಿಗೆ ಕುಡಿವ ನೀರಿನ ಅಭಾವ ಸೃಷ್ಠಿಯಾಗುವ ಸಾಧ್ಯತೆಯಿದ್ದು ಜಲಮೂಲಗಳ ಸಂರಕ್ಷಣೆಗೆ ಸ್ಥಳೀಯ ಆಡಳಿತಗಳ ಮೂಲಕ ಕಾರ್ಯಯೋಜನೆ ರೂಪಿಸಬೇಕೆಂಬುದು ಸಮಿತಿಯ ಆಗ್ರಹವಾಗಿದೆ ಎಂದರು.
ನದಿ ತಟಗಳಲ್ಲಿ ಗ್ರಾಮಪಂಚಾಯ್ತಿ ಮಾಂಸ ಮಾರಾಟ ಮಳಿಗೆಗಳನ್ನು ನಿರ್ಬಂಧಿಸುವಂತೆ ಈಗಾಗಲೇ ಸಂಬಂಧಿಸಿದ ಆಡಳಿತ ವ್ಯವಸ್ಥೆಗೆ ನಮ್ಮ ಸಮಿತಿ ಮೂಲಕ ಮನವಿ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದ್ದು ನದಿ ತಟದ ಗ್ರಾಮ ಪಂಚಾಯ್ತಿ ಮಾಂಸ ಮಳಿಗೆಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿರುವುದು ಶ್ಲಾಘನಾರ್ಹ ಎಂದರು.
ಕುಶಾಲನಗರ ಪಟ್ಟಣ ಪಂಚಾಯ್ತಿ ಕಾವೇರಿ ನದಿ ಸ್ವಚ್ಛತೆಗೆ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿರುವುದು ಸಮಿತಿ ಸ್ವಾಗತಿಸುತ್ತದೆ ಎಂದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಭದ್ರತೆಯ ನಿಟ್ಟಿನಲ್ಲಿ ಕೂಡ ಸಂಬಂಧಿಸಿದ ಇಲಾಖೆಗಳು ಕಾರ್ಯಸೂಚಿ ರೂಪಿಸುವ ಮೂಲಕ ಕಾವೇರಿ ನದಿ ಪಾತ್ರದ ಪ್ರವಾಸಿ ಕೆಂದ್ರಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕಾಗಿದೆ. ವಿಶೇಷವಾಗಿ ದುಬಾರೆ ಕಾವೇರಿ ನದಿ ತಟದಲ್ಲಿ ಆಗಾಗ್ಯೆ ಪ್ರವಾಸಿಗರ ಸಾವು ನೋವುಗಳು ಕಂಡುಬರುತ್ತಿದ್ದು ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕಲು ಜಿಲ್ಲಾಡಳಿತ ಕಾರ್ಯಸೂಚಿ ರೂಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದರು.
ಕಾವೇರಿ ನದಿ ಸಂರಕ್ಷಣೆ ಹಿನ್ನಲೆಯಲ್ಲಿ ಸಧ್ಯದಲ್ಲಿಯೇ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ವಿ.ಡಿಸೋಜ ಭರವಸೆ ನೀಡಿದ್ದಾರೆ. ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನದಿ ಸಂರಕ್ಷಣೆ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಸಭೆಯನ್ನು ಸಧ್ಯದಲ್ಲಿಯೇ ಕರೆಯಲಾಗುವುದು. ಕಾವೇರಿ ನದಿ ಸಂರಕ್ಷಣೆ ಹಿನ್ನಲೆಯಲ್ಲಿ ಸವರ್ೋಚ್ಚ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.